ಕಂಪ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿ ಮಹಮ್ಮದ್ ರಫಿ ಅವರು ರಾಮಸಾಗರದ ರೈತರಿಂದ ಅರ್ಜಿ ಸ್ವೀಕರಿಸಿದರು. ತಹಸೀಲ್ದಾರ್ ಶಿವರಾಜ, ಎಡಿ ಕೆ.ಎಸ್.ಮಲ್ಲನಗೌಡ, ರೈತರಾದ ರಾಗಿ ಕೊಟ್ರಯ್ಯ, ವೀರಭದ್ರಯ್ಯ ಇತರರಿದ್ದರು. 
ನ್ಯೂಸ್

ಗೌರಮ್ಮ ಕೆರೆ ನೀರಿನ ಅಕ್ರಮ ಬಳಕೆದಾರರ ವಿರುದ್ಧ ಕ್ರಮವಹಿಸಿ

ಲೋಕಾಯುಕ್ತ ಅಧಿಕಾರಿಗಳಿಗೆ ರಾಮಸಾಗರದ ರೈತರ ಒತ್ತಾಯ

ಕಂಪ್ಲಿ : ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿದರು.

ರಾಮಸಾಗರದ ಗೌರಮ್ಮ ಕೆರೆಯ ನೀರನ್ನು ಭತ್ತ ಬೆಳೆದ ನಾನ್ ಆಯಕಟ್ಟಿನ ರೈತರು ಅಕ್ರಮವಾಗಿ ಉಪಯೋಗಿಸಿಕೊಂಡಿದ್ದು, ಅಯಕಟ್ಟಿನ ಮಿತ ನೀರಾವರಿ ಬೆಳೆ ಬೆಳೆದ ಸುಮಾರು 120ಎಕರೆಯ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರಿಲ್ಲದಂತಾಗಿದೆ. ಕೃಷಿ, ನೀರಾವರಿ ಅಧಿಕಾರಿಗಳಿಗೆ ಕೆರೆ ಒತ್ತುವರಿ ತೆರವು, ಅನಧಿಕೃತವಾಗಿ ನೀರು ಬಳಕೆ ತಡೆಯುವಂತೆ ಮನವಿ ಮಾಡಿದರೂ ಕ್ರಮವಹಿಸಿಲ್ಲ. ಇದೀಗ ಕೆರೆಯಲ್ಲಿ ನೀರಿಲ್ಲದಂತಾಗಿದ್ದು ಮಿತ ನೀರಾವರಿ ಬೆಳೆದ ರೈತರ ಬೆಳೆ ನಷ್ಟವಾದಲ್ಲಿ ಅಧಿಕಾರಿಗಳೇ ನಷ್ಟ ಪರಿಹಾರ ಒದಗಿಸಿಕೊಡಬೇಕು ಎಂದು ರೈತರಾದ ರಾಗಿ ಕೊಟ್ರಯ್ಯ, ವೀರಭದ್ರಯ್ಯ, ಸಂಗಯ್ಯ, ಗಾರೆ ಬಸಪ್ಪ, ವಿರೂಪಾಕ್ಷಪ್ಪ, ದಂಡಿನ ಕೃಷ್ಣಮೂರ್ತಿ ಇತರರು ಒತ್ತಾಯಿಸಿದರು.

ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಅಧ್ಯಕ್ಷ ರವಿ ಮಣ್ಣೂರು ಅರ್ಜಿ ಸಲ್ಲಿಸಿ, ಕಂಪ್ಲಿ ಭಾಗದಲ್ಲಿ ನೆಡುತೋಪು ನಿರ್ಮಾಣ, ಸಸಿಗಳ ನಿರ್ವಹಣೆ ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು. ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ್ ಮಾತನಾಡಿ, ಕಳೆದ ತಿಂಗಳ ಸಭೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ 8 ಅರ್ಜಿಗಳ ಅನುಪಾಲನೆ ಸಮರ್ಪಕವಾಗಿಲ್ಲ. ಒಂದು ಅರ್ಜಿಗೆ ಅಪೂರ್ಣ ಹಿಂಬರಹ ನೀಡಲಾಗಿದೆ ಎಂದು ದೂರಿದರು. 8 ಅರ್ಜಿಗಳನ್ನು ಪರಿಶೀಲಿಸುವಂತೆ ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸಿದರು.

ಬಳ್ಳಾರಿ ಲೋಕಾಯುಕ್ತ ನಿರೀಕ್ಷಕ ಮಹಮ್ಮದ್ ರಫಿ ಮಾತನಾಡಿ, ಅಬಕಾರಿ, ಸಾಮಾಜಿಕ ಅರಣ್ಯ, ಪುರಸಭೆ ಹಾಗೂ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಬಂಧಿಸಿದ ತಲಾ ಒಂದು ಅರ್ಜಿ ಸೇರಿ ಒಟ್ಟು ನಾಲ್ಕು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಳೆದ ತಿಂಗಳ ಸಭೆಯಲ್ಲಿ 11 ಅರ್ಜಿಗಳನ್ನು ಸ್ವೀಕರಿಸಿದ್ದು ಅದರಲ್ಲಿ 6ಕ್ಕೆ ಹಿಂಬರಹ ನೀಡಲಾಗಿದೆ. ಉಳಿದ ಅರ್ಜಿಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗಿದೆ. ಸಾರ್ವಜನಿಕರ ಅಲೆದಾಟ ತಪ್ಪಿಸಲು ಲೋಕಾಯುಕ್ತ ಇಲಾಖೆಯಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಶೇ.70 ಸಮಸ್ಯೆಗಳಿಗೆ ಪರಿಹಾರ ದೊರಕಿದೆ ಎಂದು ತಿಳಿಸಿದರು. ತಹಸೀಲ್ದಾರ್ ಶಿವರಾಜ, ತಾಪಂ ನರೇಗಾ ಎಡಿ ಕೆ.ಎಸ್.ಮಲ್ಲನಗೌಡ ಇತರರಿದ್ದರು.