ನ್ಯೂಸ್

ಮಧ್ಯಪ್ರದೇಶ ಚುನಾವಣೆಯಲ್ಲಿ ಕಳಪೆ ಪ್ರದರ್ಶನ; ಸೋಲಿನ ಹೊಣೆ ಹೊತ್ತು ಕಮಲ್​ನಾಥ್​ ರಾಜೀನಾಮೆ

ಭೋಪಾಲ್: ಇತ್ತೀಚಿಗೆ ಮುಕ್ತಾಯಗೊಂಡ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದ್ದು, ಪಕ್ಷದ​ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ರಾಜೀನಾಮೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಸೋಲಿಗೆ ಕಮಲ್​ನಾಥ್​ ಅವರ ಕಾರ್ಯವೈಖರಿಯೇ ಪ್ರಮುಖ ಕಾರಣ ಎಂದು ಪಕ್ಷದ ಹೈಕಮಾಂಡ್​ ಅಸಮಾಧಾನಗೊಂಡಿದ್ದು, ಹೊಸ ಮುಖಕ್ಕೆ ಮಣೆ ಹಾಕುವ ನಿಟ್ಟಿನಲ್ಲಿ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಅಧಿಕರತ ಸುದ್ದಿ ಮೂಲಗಳು ತಿಳಿಸಿವೆ.

ಶೀಘ್ರವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಕಮಲ್​ನಾಥ್​ ಕಾರ್ಯವೈಖರಿಗೆ ಅಸಮಾಧಾನಗೊಂಡಿದ್ದಾರೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಇದಲ್ಲದೆ ಚುನಾವಣೆ ಸಮಯದಲ್ಲಿ ಕಮಲ್​ನಾಥ್​ ವಿಪಕ್ಷಗಳ ಒಕ್ಕೂಟ ಇಂಡಿಯಾ ನಾಯಕರಾದ ನಿತೀಶ್​ ಕುಮಾರ್​ ಹಾಗೂ ಅಖಿಲೇಶ್​ ಯಾದವ್​ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಇದು ಕಾಂಗ್ರೆಸ್​ ಪಾಳಯಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು ಮತ್ತೆ ಮಧ್ಯಪ್ರದೇಶದಲ್ಲಿ ಈ ವಿಚಾರ ಬಿಜೆಪಿ ಪಾಲಿಗೆ ಪ್ರಮುಖ ಅಸ್ತ್ರವಾಗಿ ಪರಿಣಮಿಸಿತ್ತು.

ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫಿನಾಲೆ ಎಂದೇ ಬಿಂಬಿಸಲ್ಪಟ್ಟಿದ್ದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆದಿತ್ತು ಮತ್ತು ಡಿಸೆಂಬರ್​ 03ರಂದು ಫಲಿತಾಂಶ ಪ್ರಕಟಗೊಂಡಿತ್ತು. 30 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 116 ಮ್ಯಾಜಿಕ್ ಸಂಖ್ಯೆಯಾಗಿದೆ. ಬಿಜೆಪಿಯು 163 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಪಡೆದರೆ, ಕಾಂಗ್ರೆಸ್ 66 ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.