ಚಿತ್ರನಟ ಕಮಲ್​ ಹಾಸನ್​ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು. 
ನ್ಯೂಸ್

ಕಮಲ್​ ಹಾಸನ್​ ಹೇಳಕೆಗೆ ಖಂಡನೆ

ಕೋಲಾರ: ಚಿತ್ರ ನಟ ಕಮಲ್​ ಹಾಸನ್​ ಕನ್ನಡ ಭಾಷೆ ಕುರಿತು ಧ್ವಂದ್ವ ಹೇಳಿಕೆ ನೀಡಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ ಮಾತನಾಡಿ, ಭಾಷೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ಕನ್ನಡ ಭಾಷೆಯು ಶ್ರೀಮಂತವಾಗಿದ್ದು, ಸುಮಾರು ಎರಡುವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಸಂಸತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಸುಳ್ಳು ಮತ್ತು ಆಧಾರರಹಿತ ಹೇಳಿಕೆ ನೀಡಿರುವುದಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ, ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ತಪ್ಪು ಹೇಳಿಕೆ ನೀಡಿದ್ದಾರೆ. ಇದು ದುರುದ್ದೇಶಪೂರಿತ ಎಂದು ದೂರಿದರು.

ಮೊದಲು ಚಿತ್ರರಂಗದಲ್ಲಿ ನಟನಾಗಿ ಈಗ ರಾಜಕಾರಣಿಯಾದ ಮಾತ್ರಕ್ಕೆ ಹೇಳಿಕೆ ನೀಡಿರುವುದು ಸರಿಯಲ್ಲ. ವೇದಿಕೆಗಳಲ್ಲಿ ಮಾತನಾಡುವಾಗ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಕಮಲ್​ ನಟಿಸಿರುವ ಹೊಸ ಚಿತ್ರ ತಗ್​ ಲೈಫ್​ ರಾಜ್ಯದಲ್ಲಿ ಬಿಡುಗಡೆಯಾಗದಂತೆ ತಡೆಯುವ ನಿರ್ಧಾರ ಕೈಗೊಂಡಿದೆ. ಚಿತ್ರದ ವಿತರಕರು ತಮ್ಮ ಹೂಡಿಕೆ ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕಮಲಹಾಸನ್​ ಅಭಿನಯದ ಥಗ್​ ಲೈಫ್​ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡಬಾರದು. ಕನ್ನಡ ಭಾಷೆಯ ಸ್ವಾಭಿಮಾನ ಮತ್ತು ಹಿರಿಮೆಯನ್ನು ಕಾಪಾಡುವ ಹೋರಾಟ ಈದಾಗಿದ್ದು, ಇನ್ನು ಮುಂದೆ ಇಂತಹ ಪ್ರಕರಣಗಳು ಮುಂದುವರೆಯದಂತೆ ಎಚ್ಚರವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಾಳದ ವಿ.ಮುನಿರಾಜು, ತಾಲೂಕು ಅಧ್ಯಕ್ಷರಾದ ಮಾಲೂರು ಎಂ.ಶ್ರೀನಾವಾಸ, ಕೋಲಾರ ಶಶಿಕುಮಾರ, ಬಂಗಾರಪೇಟೆ ರಾಮಪ್ರಸಾದ್​, ಮಹಬೂಬ್​, ಮಂಜುನಾಥ, ಶೆಂಕರ್​ ರೆಡ್ಡಿ, ಡಿ.ವಿ.ಮಂಜುನಾಥ, ಹುಸೇನ್​, ಕೋದಂಡರಾಮಯ್ಯ, ಗಣೇಶ್​, ಲೋಕೇಶ್​, ಕೆ.ನವೀನ್​, ಸಂತೋಷ್​, ರಾಮಕೃಷ್ಣಪ್ಪ, ನವೀನ್​, ರಂಜಿತ್​ ಇದ್ದರು.