ನ್ಯೂಸ್

ಇಂಡಿಯನ್​-2 ಬಜೆಟ್​ ಮೀರಲು ಇದೊಂದೆ ಕಾರಣ; ಕಮಲ್​ ಹಾಸನ್​ ಬಿಚ್ಚಿಟ್ರು ಅಸಲಿ ಸತ್ಯ

ಚೆನ್ನೈ: ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ಡೈರೆಕ್ಟರ್​ ಶಂಕರ್ ನಿರ್ದೇಶನದ ಇಂಡಿಯನ್​-2 ಸಿನಿಮಾವು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದ್ದು, 2018ರಲ್ಲಿ ಶೂಟಿಂಗ್​ ಶುರುವಾದರು ಚಿತ್ರ ಇನ್ನೂ ಯಾಕೆ ಬಿಡುಗಡೆಯಾಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ನಿರಂತರವಾಗಿ ಕಾಡುತ್ತಿದೆ. ಇದಲ್ಲದೆ ಚಿತ್ರದ ಬಜೆಟ್​ ನಿರೀಕ್ಷೆಗೂ ಮೀರಿ ಅಧಿಕವಾಗಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಚಿತ್ರದ ನಾಯಕ ಕಮಲ್​ ಹಾಸನ್​ ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಕಮಲ್​ ಹಾಸನ್​, ಜುಲೈ 12ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ನಿರೀಕ್ಷೆಗಿಂತ ಹೆಚ್ಚಿನ ಬಜೆಟ್​ಅನ್ನು ಖರ್ಚು ಮಾಡಲಾಗಿದೆ. ಚಿತ್ರದ ಶೂಟಿಂಗ್​ ಶುರು ಮಾಡಿದಾಗ ಕೋವಿಡ್​ ಹಾಗೂ ಸೆಟ್​ನಲ್ಲಿನ ಅವಘಡಗಳಿಂದ ಚಿತ್ರದ ಬಜೆಟ್​ ಮೀರಿತು.

ಕಥೆ ಮತ್ತು ನಿರ್ದೇಶಕರು ಚಿತ್ರದ ಬಜೆಟ್​ಅನ್ನು ನಿರ್ಧರಿಸಲಿಲ್ಲ. ಕೋವಿಡ್​ ಹಾಗೂ ಸೆಟ್​ನಲ್ಲಿನ ಕೆಲವು ಅವಘಡಗಳು ನಡೆದವು ನಮ್ಮ ಚಿತ್ರದ ಬಜೆಟ್​ಅನ್ನು ನಿರ್ಧರಿಸಿದವು. ಮೂವರು ಸಿಬ್ಬಂದಿ ಮೃತಪಟ್ಟರು. ಇದರಿಂದ ನಿರ್ಮಾಪಕರಿಗೆ ಹೆಚ್ಚು ನಷ್ವವಾಯಿತು. ಆದರೂ ಚಿತ್ರಕ್ಕೆ ಬಂಡವಾಳ ಹೂಡಿದರು. ಹೀಗಾಗಿ ಚಿತ್ರದ ಬಜೆಟ್​ ಮೀರಿತು ಎಂದು ನಾಯಕ ನಟ ಕಮಲ್​ ಹಾಸನ್​ ಹೇಳಿದ್ದಾರೆ.

1996ರಲ್ಲಿ ಬಿಡುಗಡೆಯಾದ ಇಂಡಿಯನ್​ ಚಿತ್ರವು ಅಂದಿನ ಕಾಲದಲ್ಲಿ ಸೂಪರ್​ ಹಿಟ್​ ಎನ್ನಿಸಿಕೊಂಡಿತ್ತು ಮತ್ತು ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಶಂಕರ್​ ನಿರ್ದೇಶನದ ಈ ಚಿತ್ರದಲ್ಲಿ ಸೇತುಪತಿ ಎಂಬ ಪಾತ್ರದಲ್ಲಿ ಕಮಲ್​ ಹಾಸನ್​ ನಟಿಸಿದ್ದರು. ಅದರ ಮುಂದುವರಿದ ಭಾಗವಾಗಿ ಇಂಡಿಯನ್ 2 ಸಿನಿಮಾ ಮೂಡಿಬರುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕಮಲ್ ಹಾಸನ್ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಮತ್ತದೇ ಅವತಾರದಲ್ಲಿ ನೋಡಬಹುದಾಗಿದೆ.