ಬನ್ನೂರು: ಪಟ್ಟಣದಲ್ಲಿ ಕಲ್ಯಾಣವೃಷ್ಟಿಸ್ತವ ಸ್ತೋತ್ರ ಪಾರಾಯಣ ಮಹಾಭಿಯಾನದ ಅಂಗವಾಗಿ ಭಾನುವಾರ ಯಡತೊರೆ ಮಠದ ಶ್ರೀ ಬ್ರಹ್ಮಾನಂದ ಭಾರತೀ ಶ್ರೀಗಳು ಶ್ರೀ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ಸರ್ವರಿಗೂ ಅನುಗ್ರಹ ವಚನ ನೀಡಿದರು.
ಸಂಜೆ ವೇಳೆಗೆ ಆಗಮಿಸಿದ ಶ್ರೀಗಳು ದೇವಾಲಯದ ಸಭಾಂಗಣದಲ್ಲಿ ಆಸೀನರಾಗಿ ಕಲ್ಯಾಣವೃಷ್ಟಿಸ್ತವ ಸ್ತೋತ್ರ ಪಾರಾಯಣ ಮಹಾಭಿಯಾನದ ವಿಚಾರವನ್ನು ಸೇರಿದ್ದ ಎಲ್ಲ ಪ್ರಮುಖರಿಗೆ ತಿಳಿಸಿ, ಪ್ರತಿಯೊಬ್ಬರೂ ಸ್ತೋತ್ರವನ್ನು ಕಲಿತು, ಮತ್ತೊಬ್ಬರಿಗೆ ಕಲಿಸಿ ಎನ್ನುವಂತ ವಿಚಾರವನ್ನು ಮನದಟ್ಟು ಮಾಡಿದರು. ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ, ಲಕ್ಷ್ಮೀನರಸಿಂಹಕರಾವಲಂಬ ಸ್ತೋತ್ರದ ವಿಶೇಷ ಫಲದ ಬಗ್ಗೆ ತಿಳಿಸಿ ಎಲ್ಲರೂ ಕಲಿಯುವಂತೆ ತಿಳಿಸಿದರು.
ಸ್ತೋತ್ರ ಕಲಿತವರು ಈ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಸ್ತೋತ್ರ ಕಲಿಕೆಗೆ ಸಹಕಾರ ನೀಡಬೇಕು. ಇದು ವಿಧುಶೇಖರ ಭಾರತೀ ಸ್ವಾಮೀಜಿ ಅವರ ಸಂಕಲ್ಪದಂತೆ 2024ರ ಮಹಾಶಿವರಾತ್ರಿಯ ಪರ್ವದಿನದಂದು ಅಭಿಯಾನ ಆರಂಭವಾಗಿದ್ದು, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಆಸ್ತಿಕರು ತಮ್ಮನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಇದೀಗ ಮೈಸೂರು ಮತ್ತು ತಾಲೂಕಿನಾದ್ಯಂತ ಮಹಾಭಿಯಾನ ನಡೆಯುತ್ತಿದ್ದು, ಈ ಸ್ತೋತ್ರ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. ಇದನ್ನು ಎಲ್ಲರೂ ಪಾರಾಯಣ ಮಾಡಿ, ಸ್ತೋತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆದಿ ಶಂಕರಾಚಾರ್ಯರ ಮತ್ತು ಉಭಯ ಜಗದ್ಗರು ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿದರು.
ಪ್ರಮುಖ ಅರ್ಚಕರಾದ ಕೃಷ್ಣಸ್ವಾಮಿ, ಶ್ರೀನಿವಾಸ, ಜಗದೀಶ್, ವೆಂಕಟೇಶ್‌ಪ್ರಸಾದ್, ಉದಯ್, ಜಯರಾಮ ಭಟ್, ಎಂ.ಪ್ರಮೋದ್, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.