ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು 200 ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ಪ್ರಕರಣವನ್ನು ತಮಿಳುನಾಡು ಸರ್ಕಾರವು ಸಿಐಡಿಗೆ ವಹಿಸಿದ್ದು, ಕಲ್ಲಕುರಚಿ ಜಿಲ್ಲಾಧಿಕಾರಿಯನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಇದೆಲ್ಲದೆ ಘಟನೆಗೆ ಸಂಬಂಧಿಸಿದಂತೆ 9 ಮಂದಿ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದ್ದು, ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕಲ್ಲಕುರಿಚಿ ಕಳ್ಳಭಟ್ಟಿ ದುರಂತದಲ್ಲಿ ಮೃತರ ಕುಟುಂಬವನ್ನು ಭೇಟಿ ಮಾಡಿದ್ದು ಮೃತರ ಕುಟುಂಬಕ್ಕೆ ಬಿಜೆಪಿ ಪರವಾಗಿ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ನಿಷೇಧ ಮತ್ತು ಜಾರಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಕುಮಾರ್, ಐಪಿಎಸ್ ಅವರನ್ನು ವಜಾಗೊಳಿಸಲಾಗಿದ್ದು, ಇವರ ಹೊಣೆಯನ್ನು ಎಡಿಜಿಪಿ ಅರುಣ್ ಅವರಿಗೆ ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ 200 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಅದರಲ್ಲಿ ಮೆಥನಾಲ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಅಕ್ರಮ ಮದ್ಯದಲ್ಲಿ ಬೆರೆಸಿದ್ದ ಮೆಥೆನಾಲ್ ಅನ್ನು ಪುದುಚೇರಿಯಿಂದ ತರಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.