ನ್ಯೂಸ್

ಕಲ್ಲಡ್ಕ ಪ್ರಭಾಕರ ಭಟ್​ ಅವರಿಗೆ ಇಲ್ಲಿಂದ ಕನಕಪುರಕ್ಕೆ ಹೋಗಿ ಭಾಷಣ ಮಾಡುವ ಅಗತ್ಯ ಏನಿತ್ತು? ಯು.ಟಿ.ಖಾದರ್​ ವಾಗ್ದಾಳಿ

ಮಂಗಳೂರು: ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಕನಕಪುರ ಚಲೋವನ್ನು ಮಾಜಿ ಸಚಿವ ಯು.ಟಿ.ಖಾದರ್​ ವಿರೋಧಿಸಿದ್ದಾರೆ.

ಕನಕಪುರ ಚಲೋ ಹಮ್ಮಿಕೊಂಡಿದ್ದು ಡಾ. ಕಲ್ಲಡ್ಕ ಪ್ರಭಾಕರ್​ ಭಟ್​ ಅವರ ಸಣ್ಣ ಮನಸು ತೋರಿಸುತ್ತದೆ. ದೇವರ ಪ್ರತಿಮೆ ನಿರ್ಮಾಣ ಮಾಡಲು ಅಡ್ಡಿಪಡಿಸುವ ಇವರ ಮನೋಭಾವಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದರು.

ಶಾಂತಿ-ಸಂದೇಶ ಸಾರಲು ಏಸು ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಕ್ರೈಸ್ತ ಸಮುದಾಯದವರ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಸಮಾಜಕ್ಕೆ ಪೂರಕವಾಗಿವೆ. ಕ್ರೈಸ್ತ ಸಮುದಾಯದವರು ಯಾವುದನ್ನೂ ಮಿಸ್​ ಯೂಸ್​ ಮಾಡುವುದಿಲ್ಲ.

ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡುವುದಿಲ್ಲ ಎಂದು ಖಾದರ್​ ಹೇಳಿದರು.

ಕಲ್ಲಡ್ಕ ಪ್ರಭಾಕರ್​ ಭಟ್​ ಕನಕಪುರದ ಸೋದರತೆ ಹಾಳು ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದಾರೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಣ ಮಾಡುವ ಅಗತ್ಯ ಏನಿತ್ತು? ಕನಕಪುರ, ಬೆಂಗಳೂರಿನವರು ಆದರೂ ಶಾಂತಿ, ನೆಮ್ಮದಿಯಿಂದ ಇರಲಿ. ಇಲ್ಲಿ ನಾವು ನರಕ ಅನುಭವಿಸುತ್ತಿರುವುದು ಸಾಕು ಎಂದು ವಾಗ್ದಾಳಿ ನಡೆಸಿದರು.