ನ್ಯೂಸ್

ಉತ್ತರ ಅಮೆರಿಕಾದಲ್ಲಿಯೂ 'ಕಲ್ಕಿ' ಅಬ್ಬರ! ಮತ್ತೊಂದು ಮೈಲಿಗಲ್ಲು ತಲುಪಿದ ಪ್ರಭಾಸ್​ ಚಿತ್ರ

ಅಮೆರಿಕಾ: ಜೂನ್.27ರಂದು ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್​ ಸ್ಟಾರ್​, ನಟ ಪ್ರಭಾಸ್​ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಪ್ರೇಕ್ಷಕರಿಂದ ತುಂಬಿ ಹೋಗುತ್ತಿರುವ ಭಾರತದ ಥಿಯೇಟರ್​ಗಳಲ್ಲಿ ಕಲ್ಕಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಮಧ್ಯೆ ಉತ್ತರ ಅಮೇರಿಕಾದಲ್ಲಿ ಸಿನಿಮಾ ಮತ್ತೊಂದು ಮೈಲಿಗಲ್ಲು ತಲುಪಿದೆ.

ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್​-ಫಿಕ್ಷನ್​ ಚಿತ್ರ ಸದ್ಯ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದು, ಕೇವಲ ಉತ್ತರ ಅಮೆರಿಕಾದಲ್ಲಿ 17.5 ಮಿಲಿಯನ್​ ಡಾಲರ್​ ಗಳಿಕೆ ಕಂಡಿದೆ. ಈ ಮೈಲಿಗಲ್ಲನ್ನು ಭಾನುವಾರದ ಅಂತ್ಯದ ವೇಳೆಗೆ ಸಿನಿಮಾ ತಲುಪಿರುವುದು ಚಿತ್ರತಂಡಕ್ಕೆ ಭಾರೀ ಸಂತಸ ತಂದಿದೆ. ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಕಲ್ಕಿ ಪಾತ್ರವಾಗಿದೆ.

ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ದಿಶಾ ಪಟಾನಿ, ಶೋಬನಾ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಬ್ಯಾನರ್​ನಡಿ ತೆರೆಗೆ ಅಪ್ಪಳಿಸಿದ ಈ ಬಿಗ್ ಬಜೆಟ್ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್).