ನ್ಯೂಸ್

ಬಚ್ಚನ್​ರಿಂದ ಪ್ರಭಾಸ್​ ಸೋಲಲು ಇಚ್ಛಿಸಿದ್ದರು ಎಂದ ಕಲ್ಕಿ 2898 AD ನಿರ್ದೇಶಕ; ಹೀಗೆನ್ನಲು ಕಾರಣವೇನು?

ಮುಂಬೈ: ನಾಗ್​ ಅಶ್ವಿನ್​​ ನಿರ್ದೇಶನದ ‘ಕಲ್ಕಿ 2898 ಎಡಿ’ ದೇಶಾದ್ಯಂತ ಜೂನ್​​​ 27ರಂದು ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯಾದಗಿನಿಂದ ಬ್ಲಾಕ್‌ಬಸ್ಟರ್​ ಹಿಟ್​ನೊಂದಿಗೆ ಬಾಕ್ಸ್​​ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್​ನೊಂದಿಗೆ ಮುನ್ನಡೆಯುತ್ತಿದೆ. ಒಂದು ವಾರದಲ್ಲಿ ವಿಶ್ವದಾದ್ಯಂತ ಸುಮಾರು 700 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಪ್ರಭಾಸ್​​​, ಅಮಿತಾಭ್​​​​ ಬಚ್ಚನ್, ದೀಪಿಕಾ ಮತ್ತು ಕಮಲ್​ಹಾಸನ್​​​ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಷ್ಟೇ ಅಲ್ಲದೆ ಸಿನಿಮಾರಂಗದ ಪ್ರಮುಖರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೇರೆ ಬೇರೆ ಇಂಡಸ್ಟ್ರಿಯಿಂದ ನೇಮ್​​ ವಿತ್​​ ಫೇಮ್​ ಇರುವಂತಹ ಸ್ಟಾರ್ಸ್​​​ಗಳನ್ನು ಕರೆತಂದು ಸಿನಿಮಾ ಮಾಡಿದರು, ಚಿತ್ರೀಕರಣದ ವೇಳೆ ಯಾವುದೇ ನೆಗೆಟಿವ್​ ಸುದ್ದಿಗಳನ್ನು ಹೊರಬರದಂತೆ ನೋಡಿಕೊಂಡಿರುವುದು ನಿರ್ದೇಶಕ ನಾಗ್​​ ಅಶ್ವಿನ್​ ಅವರ ಮತ್ತೊಂದು ಸಾಧನೆಯಾಗಿದೆ. ಸಿನಿಮಾದಲ್ಲಿ ಪ್ರಭಾಸ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಕೂಡ ಅಮಿತಾಭ್​​​​​​ ಅವರ ಶಕ್ತಿಶಾಲಿ ಅವತಾರವನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ ಮತ್ತು ಅವರನ್ನು ಹೊಗಳುತ್ತಿದ್ದಾರೆ.

ಈ ರೀತಿಯ ದೃಶ್ಯಗಳು ನಟ ಪ್ರಭಾಸ್​ ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆ ಎಂಬ ಪ್ರಶ್ನಗೆ, ಪಿಂಕ್ವಿಲಾಗೆ ನೀಡಿರುವ ಸಂದರ್ಶನದಲ್ಲಿ ನಿರ್ದೇಶಕ ನಾಗ್​ ಅಶ್ವಿನ್​ ಉತ್ತರಿಸಿದ್ದಾರೆ. ಸಿನಿಮಾ ನಿರ್ಮಾಣದ ಸಮಯದಲ್ಲಿ ಪ್ರಭಾಸ್ ಯಾವಾಗಲೂ ಬೆಂಬಲ ನೀಡುತ್ತಿದ್ದರು. ನಮ್ಮ ನಡುವೆ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಅವರ ಸ್ಟಾರ್​ಡಮ್​​ಗೆ ಇಂಥಾ ವಿಷಯಗಳು ಸಮಸ್ಯೆಯಾಗಬೇಕಿತ್ತು. ಆದರೆ ಒಮ್ಮೆ ಕಥೆ ಕೇಳಿ ಓಕೆ ಎಂದರೆ ಅವರು ಸ್ಟೋರಿ ಕಡೆಗೆ ಸಂಪೂರ್ಣವಾಗಿ ನಿಂತಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಅಮಿತಾಭ್​​​ ಪ್ರಭಾಸ ಅವರನ್ನು ಹೊಡೆಯುವುದನ್ನು ಗಮನಿಸಬಹುದು, ಈ ಬಗ್ಗೆಯೂ ಮಾತನಾಡಿದ ನಿರ್ದೇಶಕ ನಾಗ್​ ಅಶ್ವಿನ್​​, ಯಾವುದೇ ಮುಖ್ಯವಾಹಿನಿಯ ನಟನಿಗೆ ತೆರೆಯ ಮೇಲೆ ಇನ್ನೊಬ್ಬ ನಟ ಹೊಡೆಯುವುದು ದೊಡ್ಡ ವಿಷಯವಾಗಿದೆ. ಇಂದಿನ ಕಾಲದಲ್ಲಿ ನಟರನ್ನು ಮುಟ್ಟುವುದು ಕಷ್ಟ, ಇದು ದೊಡ್ಡ ವಿಷಯ. ಆದರೆ ಚಿತ್ರೀಕರಣದಲ್ಲಿ ನನಗೆ ಇದು ತುಂಬಾ ಸಹಜವಾಗಿಯೇ ಇತ್ತು. ಫೈಟಿಂಗ್​​ ಸೀನ್​ಗಳಲ್ಲಿ ಪ್ರಭಾಸ್ ಅವರು ಅಮಿತಾಭ್​​ ಬಚ್ಚನ್ ಅವರಿಂದ ಸೋಲಲು ಬಯಸಿದ್ದರು. ಅಲ್ಲದೆ ಈ ದೃಶ್ಯದ ಸಮಯದಲ್ಲಿ ಪ್ರಭಾಸ್​ ಅವರು ಅಮಿತಾಭ್​ ಅವರಿಗೆ 'ಸರ್, ನನ್ನನ್ನು ತುಂಬಾ ಬಿಗಿಯಾಗಿ ಹಿಡಿದುಕೊಳ್ಳಿ' ಎಂದು ಹೇಳುತ್ತಿದ್ದರು. ಇದು ತುಂಬಾ ಖುಷಿ ತಂದಿತು ಎಂದು ಹೇಳಿದ್ದಾರೆ.

ಅಮಿತಾಭ್​ ಅವರು ಕೂಡ ಹಿರಿಯ ನಟನಾಗಿದ್ದರು ಇಂತಹ ಪ್ರಯೋಗಗಳಿಗೆ ಬೆಂಬಲಿಸಿದರು ಎಂದು ನಿರ್ದೇಶಕ ನಾಗ್​​ ಅಮಿತಾಭ್​ ಅವರನ್ನು ಹೊಗಳಿದ್ದಾರೆ. ಈ ಹಿಂದೆ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಭಾಸ್ ಕೂಡ ಅಮಿತಾಭ್​​ ಅವರನ್ನು ಹೊಗಳಿದ್ದರು. ಉತ್ತರದಿಂದ ಬಂದಿರುವ ಅಮಿತಾಭ್ ಸರ್ ದಕ್ಷಿಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು ಎಂದು ಹೇಳಿದ್ದರು. (ಏಜೆನ್ಸೀಸ್​​)