ನಂಜನಗೂಡು: ನಗರದ ನಾರಾಯಣರಾವ್ ಅಗ್ರಹಾರದಲ್ಲಿರುವ ಶ್ರೀಕೃಷ್ಣ ಧ್ಯಾನ ಮಂದಿರದ 13ನೇ ವಾರ್ಷಿಕೋತ್ಸವ ಅಂಗವಾಗಿ ಮಂಗಳವಾರ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ 108 ಕಳಸಾಭಿಷೇಕ ನೆರವೇರಿಸಿದರು.
ನಂಜನಗೂಡು ಪುರ ಪ್ರವೇಶಿಸುತ್ತಿದ್ದಂತೆ ಅವರನ್ನು ಭಕ್ತಿಯಿಂದ ಬರಮಾಡಿಕೊಂಡ ಭಕ್ತರು, ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ಆರತಿ ಬೆಳಗಿ ನೇರವಾಗಿ ಯುವ ಬ್ರಿಗೇಡ್ ಕಾರ್ಯಕರ್ತರ ಸಮ್ಮುಖದಲ್ಲಿ ಬೈಕ್ ರ‌್ಯಾಲಿ ಮೂಲಕ ಶ್ರೀಕೃಷ್ಣ ಧ್ಯಾನ ಮಂದಿರಕ್ಕೆ ಆಗಮಿಸಿದರು. ನಂತರ ಧ್ಯಾನ ಮಂದಿರದಲ್ಲಿ ಕೃಷ್ಣ ಪರಮಾತ್ಮರಿಗೆ 108 ಕಳಸಾಭಿಷೇಕ ನೆರವೇರಿಸಿ ಧಾರ್ಮಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಸೋಮವಾರವಷ್ಟೇ ಶೃಂಗೇರಿ ಮಠದ ವಿಭೂಶೇಖರ ಭಾರತಿ ಶ್ರೀಗಳಿಂದ ಲೋಕಾರ್ಪಣೆಗೊಂಡ ಗಣಪತಿ ದೇವಾಲಯಕ್ಕೂ ಭೇಟಿನೀಡಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಮಂತ್ರಾಕ್ಷತೆ, ಫಲ ಪುಷ್ಪ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ನೆರೆದಿದ್ದರು. ಬಳಿಕ ಮೈಸೂರಿಗೆ ತೆರಳಿದರು.