ನ್ಯೂಸ್

ಗಂಡ ಫೋನ್​ ನೋಡ್ತಿದ್ದಂತೆ ಓಡಿ ಹೋದ ಪತ್ನಿ... ಮರುಕ್ಷಣದಲ್ಲೇ ಜೋಡಿ ಕೊಲೆ, ಹರಿಯಿತು ನೆತ್ತರು! Kalanjoor Double Murder

Kalanjoor Double Murder : ಕೇರಳದ ಕಲಂಜೂರು ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಪ್ತ ಸ್ನೇಹಿತನನ್ನು ಬರ್ಬರವಾಗಿ ಕೊಂದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ.

ನಿನ್ನೆ (ಮಾ.02) ರಾತ್ರಿ ವೈಷ್ಣ (27) ಮತ್ತು ವಿಷ್ಣು (34) ಕೊಲೆಯಾಗಿದ್ದಾರೆ. ಈ ಪ್ರಕರಣದಲ್ಲಿ ವೈಷ್ಣಳ ಪತಿ ಬೈಜು ಎಂಬಾತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ತನ್ನ ಪತ್ನಿ, ಸ್ನೇಹಿತನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಕೊಲೆ ಮಾಡಿರುವುದಾಗಿ ಬೈಜು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಬೈಜು ಮತ್ತು ಅವನ ಸ್ನೇಹಿತ ವಿಷ್ಣು ಬಡಗಿಗಳು. ನಿನ್ನೆ ಕೆಲಸ ಮುಗಿಸಿ ಒಟ್ಟಿಗೆ ಮನೆಗೆ ಬಂದಿದ್ದರು. ಮನೆಗೆ ಬಂದ ಬೈಜು, ತನ್ನ ಹೆಂಡತಿಯ ಫೋನ್​ನಲ್ಲಿ ಏನೋ ರಹಸ್ಯ ಇರುವುದನ್ನು ನೋಡಿದ್ದಾನೆ. ಬಳಿಕ ವಾಟ್ಸ್​ಚಾಪ್​ ಚಾಟ್‌ಗಳನ್ನು ನೋಡಿದಾಗ ವೈಷ್ಣ ಮತ್ತು ವಿಷ್ಣು ತುಂಬಾ ಹತ್ತಿರವಾಗಿರುವುದು ಬೈಜುಗೆ ಗೊತ್ತಾಗಿದೆ.

ಇತ್ತ ಬೈಜು ಫೋನ್ ಪರಿಶೀಲಿಸುತ್ತಿರುವುದನ್ನು ನೋಡಿದ ವೈಷ್ಣ, ವಿಷ್ಣುವಿನ ಮನೆಗೆ ಓಡಿಹೋಗಿದ್ದಾಳೆ. ಅಂದಹಾಗೆ, ವಿಷ್ಣು, ಬೈಜು ಮನೆಯಿಂದ ನೂರು ಮೀಟರ್ ದೂರದಲ್ಲಿ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ವೈಷ್ಣ, ವಿಷ್ಣುವಿನ ಮನೆಯ ಬಾಗಿಲು ತಟ್ಟಿ ಆತನನ್ನು ಕರೆಯಲು ಪ್ರಯತ್ನಿಸಿದಾಗ, ಬೈಜು ಅವಳನ್ನು ಹಿಂಬಾಲಿಸಿ ಬಂದು ಮಚ್ಚಿನಿಂದ ಅವಳ ತಲೆ ಮತ್ತು ಕುತ್ತಿಗೆಯನ್ನು ಸೀಳಿದ್ದಾನೆ.

ವೈಷ್ಣಳನ್ನು ಕೊಂದ ಬಳಿಕ ವಿಷ್ಣುವಿನ ಮೇಲೂ ಬೈಜು ಭೀಕರವಾಗಿ ದಾಳಿ ಮಾಡಿದ್ದಾನೆ. ವಿಷ್ಣುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರೆ, ವೈಷ್ಣ ಮಾತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಅಂದಹಾಗೆ ವಿಷ್ಣು ಮತ್ತು ಬೈಜು ಆತ್ಮೀಯ ಸ್ನೇಹಿತರು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರಿಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಒಂದೇ ಚಾಪೆಯ ಮೇಲೆ ಮಲಗುತ್ತಿದ್ದರು. ಇನ್ನು ಘಟನೆ ನಡೆದ ಪ್ರದೇಶವು ಯಾವುದೇ ಮನೆಗಳಿಗೆ ಹತ್ತಿರದಲ್ಲಿ ಇರದೇ ಇರುವುದರಿಂದ ನೆರೆಹೊರೆಯವರಿಗೆ ಯಾವುದೇ ಅಳು ಅಥವಾ ಶಬ್ದ ಕೇಳಿಸಲಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)