ನ್ಯೂಸ್

ಸೆಪ್ಟೆಂಬರ್‌ಗೆ ಕೆಐಎನಲ್ಲಿ ಕಲಾಲೋಕ ಮಳಿಗೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ) ಟರ್ಮಿನಲ್-2ರಲ್ಲಿ ಸೆಪ್ಟೆಂಬರ್‌ಗೆ ಕಲಾಲೋಕ ಮಳಿಗೆಯನ್ನು ಉದ್ಘಾಟನೆ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಸರ್ಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ (ವಿಟಿಪಿಸಿ) ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಕೆಲ ಯೋಜನೆ ಪ್ರಗತಿಯ ಸಂಬಂಧ ಸಚಿವರು ಪರಿಶೀಲನಾ ಸಭೆ ನಡೆಸಿದರು.

ಆನಂತರ ಮಾತನಾಡಿದ ಅವರು, ರಾಜ್ಯದ ಅಸ್ಮಿತೆ ಸಾರುವ 6 ವಸ್ತು ಮತ್ತು ಜಿಐ ಟ್ಯಾಗ್ ಹೊಂದಿರುವ 28 ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಇರುವ ಆಕರ್ಷಕ ಕಲಾಲೋಕ ಮಳಿಗೆ ಸಿದ್ಧವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಲಾಲೋಕ ಮಳಿಗೆಯಲ್ಲಿ ಕಾಫಿ, ಮೈಸೂರು ಸಿಲ್ಕ್, ಲಿಡ್ಕರ್ ಉತ್ಪನ್ನಗಳು, ಕರಕುಶಲ ನಿಗಮದ ವಸ್ತುಗಳು, ಕೆಎಸ್‌ಡಿಎಲ್ ಉತ್ಪನ್ನಗಳಾದ ಗಂಧದ ಸಾಬೂನು ಮತ್ತು ಕೈಮಗ್ಗ ನಿಗಮದ ಉತ್ಪನ್ನಗಳು ಇರಲಿವೆ. ಜತೆಗೆ ಚನ್ನಪಟ್ಟಣದ ಬೊಂಬೆಯಂಥ 28 ಜಿಐ ಉತ್ಪನ್ನಗಳನ್ನು ಇರಲಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕಿಂಗ್ ವಿನ್ಯಾಸ ಮತ್ತು ಬ್ರ್ಯಾಂಡಿಂಗ್ ಮಾಡಿ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುತ್ತಿದೆ. ಜಾಗತಿಕ ಮಟ್ಟದ ಗ್ರಾಹಕರನ್ನು ಸೆಳೆಯುವುದು ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿಇಂಟರ್ ನ್ಯಾಷನಲ್ ಲಾಂಜ್ನಲ್ಲೂ ಕಲಾಲೋಕ ಮಳಿಗೆ ತೆರೆಯಲಾಗುತ್ತದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಈಗ ಸಿದ್ಧವಾಗಿರುವ ಮೊದಲ ಮಳಿಗೆ 130 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಆಗಸ್ಟ್ ಕೊನೆಯ ಹೊತ್ತಿಗೆ ಪೂರ್ಣವಾಗಲಿದೆ. ಕೆಐಎನಲ್ಲಿ ನಿಗದಿತ ಬಾಡಿಗೆಯಲ್ಲಿ ಶೇ.50 ರಿಯಾಯಿತಿ ಕೊಟ್ಟಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಇದ್ದರು.