ನ್ಯೂಸ್

ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತ ಸಾವಿಗೆ ಶರಣು: ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಕಿರುಕುಳ ಆರೋಪ

ಕಲಬುರಗಿ: ಬಿಜೆಪಿ ಕಾರ್ಯಕರ್ತನೊಬ್ಬ ಸಾವಿಗೆ ಶರಣಾಗಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಿರೋಳ್ಳಿ ಗ್ರಾಮದಲ್ಲಿ ನಡೆದಿದ್ದು, ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಶಿವಕುಮಾರ್ ಮೃತ ದುರ್ದೈವಿ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ್ ಸಂಬಂಧಿ ನರಸಪ್ಪ ಎಂಬುವರ ಹೊಲಕ್ಕೆ ಹೋಗಿ ಕಾಂಗ್ರೆಸ್​ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಇದರಿಂದ ಬೇಸತ್ತು ಶಿವಕುಮಾರ್​ ಸಾವಿನ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಇದಿಷ್ಟೇ ಅಲ್ಲದೆ, ಆತ್ಮಹತ್ಯೆಗೂ ಮುನ್ನ ಶಿವಕುಮಾರ್​ ಮೂರು ಆಡಿಯೋ ರೇಕಾರ್ಡ್ ಮಾಡಿದ್ದು, ತನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ನೇರ ಕಾರಣ ಅಂತ ಆರೋಪ ಮಾಡಿದ್ದಾರೆ.

ನಾನು ಹಿಂದು ಹುಲಿಯಾಗಿದ್ದೇನೆ ಮತ್ತು ಹಿಂದು ಹುಲಿಯಾಗಿಯೇ ಸಾಯುತ್ತೇನೆ. ನಾನು ಹಿಂದು ಧರ್ಮದ ಬಗ್ಗೆ ಎಲ್ಲಿಯೂ ಮಾತಾಡಬಾರದು, ಮಾತಾಡಿದರೆ ಇವರ ಹೊಟ್ಟೆ ಬೆಂಕಿ ಬೀಳುತ್ತೆ. ಹೀಗಾಗಿ ನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣ ಎಂದು ಶಿವಕುಮಾರ್​ ಗಂಭೀರ ಆರೋಪ ಮಾಡಿದ್ದಾರೆ.

ರೆಕಾರ್ಡ್​ ಮಾಡಿದ ಮೂರು ಆಡಿಯೋವನ್ನು ಆಪ್ತ ವಲಯಕ್ಕೆ ಕಳುಹಿಸಿ ಶಿವಕುಮಾರ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಕಲಬುರಗಿಯಲ್ಲಿ ಈ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದು, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಸಂಬಂಧ ಸುಲೆಪೇಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.