ನ್ಯೂಸ್

ಜ.11 ಹಾಗೂ 12ರಂದು ಕದ್ರಿ ಪಾರ್ಕ್‌ನಲ್ಲಿ ‘ಕಲಾ ಪರ್ಬ’

ಮಂಗಳೂರು: ಶರಧಿ ಪ್ರತಿಷ್ಟಾನ ಮಂಗಳೂರು ವತಿಯಿಂದ ಅಸ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜ.11 ಮತ್ತು 12 ರಂದು ಮಂಗಳೂರಿನ ಕದ್ರಿಪಾರ್ಕ್‌ನಲ್ಲಿ ‘ಕಲಾ ಪರ್ಬ’ ಎಂಬ ಚಿತ್ರ, ನೃತ್ಯ, ಶಿಲ್ಪ ಮೇಳವನ್ನು ಕರಾವಳಿ ಉತ್ಸವದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಚಿತ್ರಕಲಾವಿದ ದಿನೇಶ್ ಹೊಳ್ಳ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಲಾ ಮೇಳದಲ್ಲಿ ಸುಮಾರು 150 ಕಲಾ ಮಳಿಗೆಗಳಲ್ಲಿ ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಮಾಡಲಿದ್ದಾರೆ. ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಕಾರ್ಕಳದ ಸಿ. ಇ. ಕಾಮತ್ ಇನ್‌ಸ್ಟಿಟ್ಯೂಟ್ ಆ್ ಆರ್ಟಿಸನ್ ಅವರಿಂದ ಶಿಲ್ಪ ಕಲಾ ಪ್ರಾತ್ಯಕ್ಷಿಕೆ, ನಂದಗೋಕುಲ ಕಲಾ ತಂಡ,ಭರತಾಂಜಲಿ ನೃತ್ಯ ತಂಡ, ನೃಟ್ಯಾಂಗನ ತಂಡ, ಗಾನ ನೃತ್ಯ ಅಕಾಡೆಮಿಯವರಿಂದ ವೇದಿಕೆಯಲ್ಲಿ 2 ದಿನವೂ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಜ.11ರಂದು ಮಧ್ಯಾನ್ನ 2ಕ್ಕೆ 2 ರಿಂದ 10 ನೇ ತರಗತಿಯ ಮಕ್ಕಳಿಗೆ 3 ವಿಭಾಗಗಳಲ್ಲಿ ಚಿತ್ರ ಕಲಾ ಸ್ಪರ್ಧೆ ಜರುಗಲಿದೆ. 2ರಿಂದ 4 ನೇ ತರಗತಿಯ ಮಕ್ಕಳಿಗೆ ಸೂರ್ಯೋದಯ ಚಿತ್ರ ರಚನೆ, 4 ರಿಂದ 7 ತರಗತಿಯ ಮಕ್ಕಳಿಗೆ ನೀವು ಕಂಡ ವನ್ಯ ಜೀವಿ ಚಿತ್ರ ರಚನೆ, 8 ರಿಂದ 10 ನೇ ತರಗತಿಯ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ, ಪ್ರಕೃತಿ, ಪದ್ಧತಿಯ ಬಗ್ಗೆ ಚಿತ್ರ ರಚನೆಗೆ ವಿಷಯವನ್ನು ನೀಡಲಾಗಿದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನಾ ಪತ್ರ, ಐಸ್ ಕ್ರೀಮ್ ಕೂಪನ್‌ಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನ ಚಿನ್ನದ ನಾಣ್ಯ, ದ್ವಿತೀಯ ಮತ್ತು ತೃತೀಯ ಬಹುಮಾನ ನಗದು ರೂಪದಲ್ಲಿ ನೀಡಲಾಗುತ್ತದೆ. ಜತೆಗೆ ಛಾಯಾ ಚಿತ್ರ ಪ್ರದರ್ಶನ, ಸ್ಥಳದಲ್ಲೇ ಭಾವಚಿತ್ರ ರಚನೆ, ವ್ಯಂಗ್ಯ ಚಿತ್ರ ರಚನೆ, ಮೇಕ್ ಅಪ್, ಮೆಹಂದಿ ಸ್ಪರ್ಧೆ, ಯೋಗ ತರಬೇತಿ, ಪ್ರತಿಷ್ಟಾಪನಾ ಕಲಾ ಪ್ರದರ್ಶನ ಇತ್ಯಾದಿ ಈ ಕಲಾ ಪರ್ಬದಲ್ಲಿ ಜರುಗಲಿದೆ ಎಂದರು. ಈ ಸಂದರ್ಭ ಶರಿಧಿ ಪ್ರತಿಷ್ಠಾನ ಕಾರ‌್ಯದರ್ಶಿ ಪುನೀಕ್ ಶೆಟ್ಟಿ, ಪ್ರಸಾದ್ ಆರ್ಟ್ ಗ್ಯಾಲರಿ ಕೋಟಿ ಪ್ರಸಾದ್ ಆಳ್ವ, ಯೋಗಪಟು ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.