ರಾಣೆಬೆನ್ನೂರ: ಕಾಕಿ ಜನಸೇವಾ ಸಂಸ್ಥೆ, ಸೌರಭ ಜಾನಪದ ಕಲಾವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ. 11ರಂದು ರಾಜ್ಯಮಟ್ಟದ ಜನಪದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ದೊಡ್ಡನಾಗಪ್ಪ ತಿರಕಪ್ಪ ಕಾಕಿ ಹಾಗೂ ಸಣ್ಣ ನಾಗಪ್ಪ ಕಾಕಿ ಇವರ ಪುಣ್ಯಸ್ಮರಣೋತ್ಸವ ನಿಮಿತ್ತ ಅಂದು ಉತ್ಸವದ ಜತೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಗಣೇಶೋತ್ಸವ ಅರಮನೆಯಲ್ಲಿ ಸಮಾರಂಭ ಜರುಗಲಿದೆ.
ಜನಪದ ಉತ್ಸವ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ದೇಹದಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಜೇಸಿಐ ತಾಲೂಕು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ, ಜೇಸಿವಾಣಿ ಅರಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಸೇರಿ ಇತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಪದ ಉತ್ಸವದಲ್ಲಿ ಭರತನಾಟ್ಯ, ಜೋಗತಿ ನೃತ್ಯ, ಲಂಬಾಣಿ ನೃತ್ಯ ಸೇರಿ ಇತರ ಕಲಾತಂಡಗಳು ಕಲೆ ಪ್ರದರ್ಶನ ಮಾಡಲಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರೂಪಾ ಕಾಕಿ, ಪ್ರಮುಖರಾದ ದೊಡ್ಡ ಹನುಮಂತಪ್ಪ ಕಾಕಿ, ಕೆ.ಸಿ. ನಾಗರಜ್ಜಿ, ಶಿವಾನಂದ ಬಗಾದಿ, ಕೊಟ್ರೇಶಪ್ಪ ಎಮ್ಮಿ, ಪ್ರಭುಲಿಂಗಪ್ಪ ಹಲಗೇರಿ, ಶಿವಶಂಕರ ಕೆ., ನಿತ್ಯಾನಂದ ಕುಂದಾಪುರ, ಶಿವಪ್ಪ ಬಣಕಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.