ಕಾಗೋಡು ತಿಮ್ಮಪ್ಪ 
ನ್ಯೂಸ್

ಕಾಗೋಡು ತಿಮ್ಮಪ್ಪಗೆ ಎರಡು ಗೌರವ ಡಾಕ್ಟರೇಟ್!

ಶಿವಮೊಗ್ಗ: ಜಿಲ್ಲೆಯ ಎರಡು ವಿಶ್ವವಿದ್ಯಾಲಯಗಳ ಘಟಿಕೋತ್ಸವ ಒಂದೇ ದಿನ ನಿಗದಿಯಾಗಿದೆ. ಬೆಳಗ್ಗೆ ಒಂದು ವಿವಿಯ ಘಟಿಕೋತ್ಸವವಾದರೆ ಮಧ್ಯಾಹ್ನ ಮತ್ತೊಂದು ವಿವಿಯಲ್ಲಿ ಘಟಿಕೋತ್ಸವ ನಡೆಯಲಿದೆ. ಇಷ್ಟು ಮಾತ್ರವಲ್ಲ ಎರಡೂ ವಿವಿಗಳಲ್ಲಿ ಒಬ್ಬರು ಗೌರವ ಡಾಕ್ಟರೇಟ್‌ಗೆ ಭಾಜನರಾಗಲಿದ್ದಾರೆ. ಅವರೇ ಕಾಗೋಡು ತಿಮ್ಮಪ್ಪ.

ಜ.22ರ ಬೆಳಗ್ಗೆ 10.30ಕ್ಕೆ ಕುವೆಂಪು ವಿವಿಯ 34ನೇ ಘಟಿಕೋತ್ಸವ ಹಾಗೂ ಮಧ್ಯಾಹ್ನ 2ಕ್ಕೆ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿಯ 9ನೇ ಘಟಿಕೋತ್ಸವ ನಿಗದಿಯಾಗಿದೆ. ವಿವಿಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾಜವಾದಿ ಹಿನ್ನೆಲೆಯಿಂದ ಬಂದ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್, ಹಲವು ಖಾತೆಗಳನ್ನು ನಿರ್ವಹಿಸಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎರಡೂ ವಿವಿಗಳ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ. ಒಂದೇ ದಿನ ಎರಡು ವಿವಿಗಳಲ್ಲಿ ಗೌರವ ಡಾಕ್ಟರೇಟ್ ಪಡೆದ ವ್ಯಕ್ತಿ ಎಂಬ ಗೌರವ ಕಾಗೋಡುಗೆ ಸಲ್ಲಲಿದೆ.

ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿಯ ಇರುವಕ್ಕಿ ಕ್ಯಾಂಪಸ್ ನಿರ್ಮಾಣದಲ್ಲಿ ಕಾಗೋಡು ತಿಮ್ಮಪ್ಪ ಹೆಚ್ಚು ಆಸಕ್ತಿ ವಹಿಸಿದ್ದರು. ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಅನುದಾನ ಬಿಡುಗಡೆಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದ ಕೃಷಿ ಹಾಗೂ ತೋಟಗಾರಿಕೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಕಾಗೋಡು ತಿಮ್ಮಪ್ಪ ಅವರ ರಾಜಕೀಯ ಹಾಗೂ ಸಮಾಜಸೇವೆ ಗುರುತಿಸಿ ಕುವೆಂಪು ವಿವಿಯೂ ಗೌರವ ಡಾಕ್ಟರೇಟ್ ನೀಡುತ್ತಿದೆ.

ಕುವೆಂಪು ವಿವಿಯಲ್ಲಿ ಕಾಗೋಡು ತಿಮ್ಮಪ್ಪ ಅವರೊಂದಿಗೆ ಸಿ.ಎಸ್.ಉನ್ನಿಕೃಷ್ಣನ್ ಹಾಗೂ ಯೋಗ ಗುರು ಭದ್ರಾವತಿಯ ನಾಗರಾಜ್ ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.