ನ್ಯೂಸ್

ಮೋಹ ತೊರೆಯುವ ಮಾರ್ಗ ಯಾವುದು ಗೊತ್ತಾ..?

chandru

ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯ- |

ನೊಂದರಿಂ ಮಾಯೆಯಾಟವ ಮೀರುವಂತೆ ||

ಇಂದ್ರಿಯಾತೀತ ದರ್ಶನಕೆ ಬೇರೊಂದಕ್ಷಿ |

ಸಂಧಾನವನು ಕಲಿಯೊ - ಮಂಕುತಿಮ್ಮ ||

‘ತ್ರ್ಯಕ್ಷನ್ ಅಂದರೆ ತ್ರಿನೇತ್ರ ಅಂದರೆ ಶಿವ. ಆತನು ತನ್ನೆರಡು ಕಂಗಳಿಂದ ದ್ವಂದ್ವಮಯ ಲೋಕವನ್ನು ಪೊರೆಯುತ್ತಿದ್ದಾನೆ. ಮತ್ತೊಂದರಿಂದ ಮಾಯೆಯಾಟವನ್ನು ಮೀರಿದ್ದಾನೆ. ಹೀಗೆಯೇ ಇಂದ್ರಿಯಾತೀತವಾದುದನ್ನು ದರ್ಶಿಸಬೇಕೆಂದಾದರೆ ಬೇರೊಂದು ಕಣ್ಣನ್ನು ಹೊಂದುವುದಕ್ಕೆ ಕಲಿತುಕೋ’ ಎನ್ನುತ್ತದೆ ಈ ಕಗ್ಗ.

ಪೌರಾಣಿಕ ಕಥೆಗಳು ಮನುಷ್ಯ ಬದುಕಿಗೆ ಉತ್ತಮ ಸಂದೇಶಗಳನ್ನು ನೀಡುತ್ತವೆ. ಲೋಕಜೀವಿತದಂತೆಯೇ ಭಗವಂತನಿಗೂ ಸಂಸಾರ, ಮನೆ, ಮಕ್ಕಳು ಎಂಬ ಕಲ್ಪನೆಯಿದೆ. ಸಾಮಾನ್ಯ ಮನುಷ್ಯನು ಅನುಭವಿಸುವ ತಾಕಲಾಟಗಳನ್ನು ಪರಮಾತ್ಮನೂ ಎದುರಿಸುತ್ತಾನೆ. ಆಗ ಆತ ನಡೆದುಕೊಳ್ಳುವ ರೀತಿಯು ಮಾನವಜೀವನಕ್ಕೆ ಅನುಸರಣೀಯ ಆದರ್ಶವನ್ನು ಬೋಧಿಸುತ್ತದೆ. ಶಿವನ ಸ್ವರೂಪವಂತೂ ವಿಶೇಷವಾಗಿದೆ. ಶಿವನು ರೌದ್ರಸ್ವರೂಪನೂ ಹೌದು, ಪ್ರೇಮಮೂರ್ತಿಯೂ ಹೌದು. ಸುಖ-ದುಃಖ, ನೋವು-ನಲಿವುಗಳಿಂದ ಕೂಡಿದ ದ್ವಂದ್ವಮಯ ಪ್ರಪಂಚವನ್ನು ಶಿವನು ತನ್ನೆರಡು ಕಂಗಳಿಂದ ಪಾಲಿಸುತ್ತಿದ್ದಾನೆ. ಹಾಗೆಯೇ ಪರಶಿವನು ಲಯಾಧಿಪತಿ, ತ್ರಿನೇತ್ರ. ತನ್ನ ಹಣೆಯಲ್ಲಿರುವ ಕಣ್ಣಿನಿಂದ ಜಗತ್ತನ್ನೇ ಸುಟ್ಟುಬಿಡಬಲ್ಲ. ಕರುಣೆ, ವಾತ್ಸಲ್ಯಗಳನ್ನು ಹರಿಸಿ ಪೊರೆದ ತನ್ನದೇ ಲೋಕವನ್ನು, ಕಾಲಾಂತ್ಯದಲ್ಲಿ ನಿರ್ಮಮಭಾವದಿಂದ ನಾಶಗೊಳಿಸುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ ಶಿವನು ಮೋಹಕ್ಕೆ ಒಳಗಾಗದ ದ್ವಂದ್ವಾತೀತನಾಗಿದ್ದಾನೆ.

ಕಾಮ, ಕ್ರೋಧಾದಿಗಳಿಂದ ಬಾಧಿತವಾದ ಮನುಷ್ಯಜೀವಿತಕ್ಕೆ ಪರಮೇಶ್ವನ ನಡೆಯು ದಿವ್ಯಸಂದೇಶವನ್ನು ಅರುಹುತ್ತದೆ. ಪಂಚೇಂದ್ರಿಯಗಳ ಮೂಲಕ ಲೋಕದ ಚೆಲುವು-ಒಲವಿನ ಅನುಭವ ಪಡೆವ ಮನುಷ್ಯನು, ಇಂದ್ರಿಯಸುಖದ ಹಿಂದೆ ಬೀಳುತ್ತಾನೆ, ಅದನ್ನು ಪಡೆಯುವುದೇ ಆತ್ಯಂತಿಕ ಗುರಿಯಾಗಿಬಿಡುತ್ತದೆ. ಬಾಂಧವ್ಯಗಳ ಮೋಹವು ಬುದ್ಧಿಯನ್ನು ಮಂಕಾಗಿಸುತ್ತದೆ. ಇದರಿಂದಾಗಿ ಮತ್ತೆಮತ್ತೆ ಇಹದ ತಾಪತ್ರಯಗಳಿಗೆ, ಬಂಧನಕ್ಕೆ ಒಳಗಾಗುತ್ತಾನೆ. ಭೋಗಜೀವನದ ಕಾಮನೆಗಳಲ್ಲಿ ಉನ್ನತ ಗುರಿ ಕರಟಿಹೋಗುತ್ತದೆ. ತಪ್ಪಿನರಿವಿದ್ದರೂ ಸರಿಪಡಿಸಲಾಗದಷ್ಟು ಮೋಹವಶನಾಗುತ್ತಾನೆ.

ಪರಶಿವನನ್ನು ನಂಬಿ ನಡೆವ ನಾವು ಆತನ ಗುಣಗಳನ್ನೂ ಅನುಸರಿಸಬೇಕು. ಮೋಹಮಾಯೆಯನ್ನು ತೊಡೆದು ನಡೆಯಲು ಶಕ್ತರಾಗಬೇಕು. ಅಂದರೆ ಲೋಕಸಂಸಾರದಿಂದ ವಿರಕ್ತರಾಗಬೇಕೆಂದಲ್ಲ. ಆತ್ಮಸಂಸ್ಕಾರ ನೀಡುವ ಲೋಕಜೀವನದಲ್ಲಿ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತ, ಮೋಹಭಾವದಿಂದ ಮುಕ್ತರಾಗಬೇಕು. ರೈತನು ಸ್ವತಃ ತಾನೇ ಮಣ್ಣಿಗಿಳಿದು ಹೊಲವನ್ನು ಉತ್ತು ಬೀಜ ಬಿತ್ತಿ ಹುಲುಸಾದ ಬೆಳೆಯನ್ನು ಬೆಳೆಯುತ್ತಾನೆ. ಯಾವ ತೊಂದರೆಯೂ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಕೊನೆಗೊಮ್ಮೆ ಸಮೃದ್ಧ ಬೆಳೆಯು ಮಾಗಿದಾಗ, ಕೊಯ್ಲು ಮಾಡಿ ಮನೆಗೆ ಹೊತ್ತು ತರುತ್ತಾನೆ. ಕಷ್ಟ ಪಟ್ಟು ಪ್ರೀತಿಯಿಂದ ಸಾಕಿ ಬೆಳೆಸಿದ ಗಿಡಗಳನ್ನು ಕಟಾವು ಮಾಡಬೇಕಲ್ಲ ಎಂಬ ಕೊರಗು ಆತನಲ್ಲಿರುವುದಿಲ್ಲ. ಮೋಹಕ್ಕೆ ಒಳಗಾಗಿ ಫಸಲನ್ನು ಹೊಲದಲ್ಲೇ ಬಿಟ್ಟುಬಿಡುವುದಿಲ್ಲ.

ಇಂತಹುದೇ ನಿಮೋಹ ತನ್ನ ಬಂಧುಗಳ ಬಗೆಗೆ ಇರುವುದಿಲ್ಲ. ಮಾಯೆಯಿಂದ ಹೊರಬರಲಾರದೆ ಸಂಸಾರದ ಸುಳಿಯೊಳಗೆ ಚಡಪಡಿಸುತ್ತಾನೆ. ಇಂದ್ರಿಯಾತೀತನಾದ ಈಶ್ವರನು ಜಗತ್ತನ್ನು ಪೊರೆಯುತ್ತಿದ್ದಾನೆ. ಅದನ್ನು ಕಾಣಬೇಕಾದರೆ ಇಂದ್ರಿಯಗಳ ಮೂಲಕ ಕವಿಯುವ ಮಾಯೆಯನ್ನು ಮೀರಬೇಕು. ಬದುಕಿನ ಭ್ರಮೆಗಳಿಂದ ಮುಕ್ತರಾಗಬೇಕು. ಸತತ ಅಂತರ್ವೀಕ್ಷಣೆಯಿಂದ ಮಾತ್ರ ಇದು ಸಾಧ್ಯ. ಅಂತರಂಗದ ಕಂಗಳನ್ನು ತೆರೆದು ಜೀವಗತಿಯನ್ನು, ಮತಿ-ಮನಗಳ ಸ್ಥಿತಿಯನ್ನು ಪರಿಶೋಧಿಸಿದರೆ ಮಾಯೆಯ ಇರುಳು ಸರಿಯುತ್ತದೆ. ಆತ್ಮಜ್ಞಾನದ ಪ್ರಭೆಯು ವೃದ್ಧಿಯಾಗುತ್ತದೆ.