ನ್ಯೂಸ್

ಕಗ್ಗದ ಬೆಳಕು: ಕರ್ಮದ ಗತಿಯೇ ಕೃತ್ರಿಮ...

ಸುರಪಸಭೆಯಲಿ ಗಾಧಿಸುತ ವಸಿಷ್ಠ ಸ್ಪರ್ಧೆ |

ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ||

ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ದ |

ಕರುಮಗತಿ ಕೃತ್ರಿಮವೊ-ಮಂಕುತಿಮ್ಮ ||307 ||

‘ದೇವೇಂದ್ರನ ಸಭೆಯಲ್ಲಿ ಗಾಧಿ ಮಹಾರಾಜನ ಮಗ ವಿಶ್ವಾಮಿತ್ರನಿಗೂ ವಸಿಷ್ಠನಿಗೂ ಸ್ಪರ್ಧೆ ನಡೆಯುತ್ತದೆ. ಇದರಿಂದಾಗಿ ಭೂಮಿಯಲ್ಲಿ ಹರಿಶ್ಚಂದ್ರನಿಗೆ ತಾಪ. ಹೀಗೆ ಪ್ರಾರಬ್ಧ ಎಲ್ಲೆಲ್ಲಿಂದಲೋ ಬರುತ್ತದೆ. ಕರ್ಮದ ಗತಿ ಕೃತ್ರಿಮ’ ಎನ್ನುತ್ತದೆ ಈ ಕಗ್ಗ.

ವಾಹನದಟ್ಟಣೆಯಿಂದ ಕೂಡಿದ ಕಿರಿದಾದ ರಸ್ತೆ. ವ್ಯಕ್ತಿಯೊಬ್ಬ ಎಚ್ಚರದಿಂದ, ವೇಗದ ಮಿತಿ ಮೀರದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಇದ್ದಕ್ಕಿದ್ದಂತೆ ಎಡ ರಸ್ತೆಯಿಂದ ವೇಗವಾಗಿ ನುಗ್ಗಿದ ಕಾರು, ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಶರವೇಗದಿಂದ ಮುಂದೆ ಹೋಯಿತು. ರಸ್ತೆಗೆ ಎಸೆಯಲ್ಪಟ್ಟ ಸವಾರನಿಗೆ ಗಂಭೀರ ಗಾಯಗಳಾದವು. ತನ್ನ ಎಚ್ಚರದಲ್ಲಿ ತಾನಿದ್ದರೂ, ಸಂಚಾರಿ ನಿಯಮ ಪಾಲಿಸಿದರೂ ಇನ್ನೊಬ್ಬರ ತಪ್ಪಿನಿಂದಾಗಿ ಆ ವ್ಯಕ್ತಿ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ನಮ್ಮ ಜೀವನದಲ್ಲೂ ಹೀಗೆ ಎಲ್ಲಿಂದಲೋ ಮಾರಕವಾದದು ಬಂದು ಎರಗುತ್ತದೆ. ಮಾಡದ ತಪ್ಪಿಗೆ ಕರ ತೆರಬೇಕಾಗುತ್ತದೆ. ಸತ್ಯಯುಗದಲ್ಲೂ ಇಂಥ ಸನ್ನಿವೇಶ ನಡೆದಿದೆ.

ಬ್ರರ್ಹ¾ ವಿಶ್ವಾಮಿತ್ರರು ಗಾಧಿ ಎಂಬ ಚಕ್ರವರ್ತಿಯ ಮಗನಾಗಿ ಹುಟ್ಟಿದವರು. ಕ್ಷತ್ರಿಯಬಲಕ್ಕಿಂತ ಬ್ರಹ್ಮತೇಜಸ್ಸು ಶ್ರೇಷ್ಠ ಎಂದು ಅರ್ಥವಾದಂದು, ರಾಜ್ಯಕೋಶಗಳನ್ನು ತ್ಯಜಿಸಿ ಉಗ್ರ ತಪಸ್ಸಿನ ಮೂಲಕ ಬ್ರರ್ಹ¾ಯಾದರು. ಒಮ್ಮೆ ದೇವೇಂದ್ರನ ಸಭೆಯಲ್ಲಿ ಬ್ರರ್ಹ¾ ವಿಶ್ವಾಮಿತ್ರರಿಗೂ, ಸೂರ್ಯವಂಶದ ಕುಲಗುರು ಬ್ರರ್ಹ¾ ವಸಿಷ್ಠರಿಗೂ ಒಂದು ವಿಚಾರದ ಬಗೆಗೆ ವಾಗ್ವಾದ ನಡೆಯಿತು. ‘ಭೂಲೋಕದಲ್ಲಿ ಅತ್ಯಂತ ಸತ್ಯಾತ್ಮನೂ, ಧರ್ವಿುಷ್ಠನೂ ಆದ ಅರಸನಿದ್ದಾನೆಯೇ?’ ಎಂದು ದೇವೇಂದ್ರ ಪ್ರಶ್ನಿಸಿದ್ದ. ಆಗ ವಸಿಷ್ಠರು ಸೂರ್ಯವಂಶದ ದೊರೆ ಹರಿಶ್ಚಂದ್ರನ ಹೆಸರನ್ನು ಹೇಳಿ ಕೊಂಡಾಡಿದರು. ಇದನ್ನು ವಿರೋಧಿಸಿದ ವಿಶ್ವಾಮಿತ್ರರು, ತಾನು ಹರಿಶ್ಚಂದ್ರನನ್ನು ಪರೀಕ್ಷಿಸಿ, ಆತನಿಂದ ಸುಳ್ಳು ಹೇಳಿಸುತ್ತೇನೆ, ಆತನೂ ಅಧರ್ಮಕ್ಕೆಳಸುವಂತೆ ಮಾಡುತ್ತೇನೆಂದು ಶಪಥ ತೊಟ್ಟು ಅಯೋಧ್ಯಾನಗರಕ್ಕೆ ಬಂದರು.

ತನ್ನ ತಪೋಬಲದಿಂದ ಮಾಯಪಾಶ ಸೃಜಿಸಿ, ಕಠಿಣ ಸಂದರ್ಭಗಳನ್ನು ತಂದಿಟ್ಟು ಹರಿಶ್ಚಂದ್ರನ ಸತ್ತ್ವಪರೀಕ್ಷೆ ಮಾಡಿದರು. ಪರಿಣಾಮವಾಗಿ ಹರಿಶ್ಚಂದ್ರನು ಸಂಸಾರಸಹಿತ ರಾಜ್ಯಭ್ರಷ್ಟನಾದನು. ಕಾಡುಮೇಡುಗಳನ್ನು ಅಲೆದು, ಋಣವನ್ನು ತೀರಿಸಲೋಸುಗ ಮಡದಿ, ಮಗನನ್ನು ಮಾರುವುದರೊಂದಿಗೆ, ಸ್ವತಃ ತನ್ನನ್ನೂ ಮಾರಿಕೊಂಡ. ಚಕ್ರವರ್ತಿಯಾಗಿದ್ದವನು ಸರ್ವವನ್ನೂ ಕಳೆದುಕೊಂಡು ಸ್ಮಶಾನವಾಸಿಯಾದ. ಕೊನೆಗೆ ಮಗನ ಹೆಣವನ್ನು ತಂದ ಮಡದಿಯನ್ನು ಗುರುತಿಸಿದರೂ ತನ್ನ ಸೇವಕಧರ್ಮವನ್ನು ಬಿಟ್ಟುಕೊಡದೆ, ಆಕೆಯ ಶಿರಚ್ಛೇದನಕ್ಕೆ ಮುಂದಾದ. ಆಗ ವಿಶ್ವಾಮಿತ್ರರು ರಾಜನ ಸತ್ಯನಿಷ್ಠೆಯನ್ನು ಮೆಚ್ಚಿ, ಸತ್ಯ ಹರಿಶ್ಚಂದ್ರನೆಂದು ಕೊಂಡಾಡಿದರು, ಆತ ಕಳೆದುಕೊಂಡಿದ್ದನ್ನೆಲ್ಲ ಹಿಂತಿರುಗಿಸಿದರು. ಹೀಗೆ ಯಾವ ಅಪರಾಧ ಮಾಡದಿದ್ದರೂ, ಬ್ರರ್ಹ¾ಗಳಿಬ್ಬರ ಸ್ಪರ್ಧೆಯಿಂದಾಗಿ ಹರಿಶ್ಚಂದ್ರ ಕಷ್ಟಪರಂಪರೆಯನ್ನೇ ಎದುರಿಸಬೇಕಾಯಿತು. ಇಂಥ ಸಂಕಟದಲ್ಲೂ ಹರಿಶ್ಚಂದ್ರ ವಿಚಲಿತನಾಗಲಿಲ್ಲ, ಮನಸ್ಸಿನ ಸ್ಥಿರತೆ ಕಳೆದುಕೊಳ್ಳಲಿಲ್ಲ. ಆತ ಸತ್ಯ-ಧರ್ಮಗಳನ್ನು ಅನುಸರಿಸುವೆನೆಂಬ ದೃಢನಿಶ್ಚಯ ಮಾಡಿಕೊಂಡಿದ್ದ. ಬದುಕಿಗೆ ಯಾವುದು ಉತ್ತಮವೋ ಅದನ್ನು ಪರಾಮಶಿಸಿ ಆಯ್ದುಕೊಂಡ ಮೇಲೆ ದ್ವಂದ್ವಕ್ಕೊಳಗಾಗದ ಗಟ್ಟಿತನ ಆತನಲ್ಲಿತ್ತು. ಇಂಥ ವಿಷಮ ಸ್ಥಿತಿಗಳು ಬದುಕಿನಲ್ಲಿ ಎದುರಾಗಲು ಪ್ರಾರಬ್ಧ ಕರ್ಮದೋಷಗಳೇ ಕಾರಣ. ಕೆಲವೊಂದು ನಮ್ಮದೇ ದೋಷಗಳಾದರೆ, ಕೆಲವು ಪರೇಚ್ಛೆಯಿಂದ ಘಟಿಸುವಂಥವು. ವಿವೇಕ ಮತ್ತು ಸಂಯಮದಿಂದ ವರ್ತಿಸಿದರೆ ಹಾನಿಯನ್ನು ತಡೆಯಬಹುದು. ಆದರೆ ನಾವು ಅನುಭವಿಸಲೇಬೇಕಾದ ಕರ್ಮದೋಷಗಳನ್ನು ಕೈಮೀರಿದ ಸಂದರ್ಭವಾಗಿ ವಿಧಿ ತಂದೊಡ್ಡುತ್ತದೆ. ಹೀಗೆ ಜೀವನದ ತಲ್ಲಣಗಳಿಗೆ ಕಾರಣವಾಗುವ ಕರ್ಮದ ಗತಿಯನ್ನು ಯಾರೂ ಅರಿತಿಲ್ಲ. ಸುಖ-ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತ, ಭಗವಂತನಿಗೆ ಪೂರ್ಣ ಶರಣಾಗಿ ಬಾಳಿದರಷ್ಟೇ ಜೀವನವು ನೆಮ್ಮದಿಯನ್ನು ಕಾಣಬಹುದು.