ನ್ಯೂಸ್

ಆತ್ಮ ಪರಮಾತ್ಮನನ್ನರಸಿ ಸಾಗುವ ಅವಧಿಯೇ ಮನುಷ್ಯ ಬದುಕು. ಈ ಸತ್ಯವನ್ನರಿತವರು ಹೇಗಿರುತ್ತಾರೆ ಎಂಬುದನ್ನು ಕಗ್ಗದ ಬೆಳಕಿನಲ್ಲಿ ನೋಡಿ..

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ |

ನೂಕುನುಗ್ಗುಗಳತ್ತ, ಸೋಂಕುರೋಗಗಳು ||

ಸಾಕಿ ಸಲಹುವರಮ್ ಅತ್ತಲೆ ನಿನಗೆ; ನಿನ್ನೆಲ್ಲ |

ಲೋಕ ಮೂಲವು ನೋಡೊ - ಮಂಕುತಿಮ್ಮ ||

‘ಲೋಕದಲ್ಲಿ ಭಯವಿರಲಿ, ನಯವಿರಲಿ ಹಾಗೆಯೇ ದಯೆಯೂ ಇರಲಿ. ಲೋಕದಲ್ಲಿರುವ ನೂಕುನುಗ್ಗಲು, ಸೋಂಕುರೋಗಗಳಿಂದ ದೂರವುಳಿ. ಸಾಕಿ ಸಲಹಿದವರು ನಿನ್ನಿಂದ ಅತ್ತಲೇ ಇರಲಿ. ನಿನ್ನೆಲ್ಲ ಲೋಕದ ಮೂಲ ನೋಡು’ ಎನ್ನುತ್ತದೆ ಈ ಕಗ್ಗ.

ಹೊರಟ ಸ್ಥಳ, ಸೇರಲಿರುವ ನಿಲ್ದಾಣದ ಅರಿವಿರದ ನಾವು ಬದುಕಿರುವಷ್ಟು ಕಾಲ ಲೌಕಿಕ ಬಾಳುವೆಯ ವಿಳಾಸವನ್ನು ಭದ್ರವಾಗಿ ಹಿಡಿದಿರುತ್ತೇವೆ. ಪ್ರೀತಿ, ಕೋಪ, ದ್ವೇಷ, ಅಸೂಯೆ ಮುಂತಾದ ಭಾವನೆಗಳ ತಾಳಮೇಳಕ್ಕೆ ಕುಣಿಯುತ್ತೇವೆ. ಬಾಳ ಬಂಡಿಯಲ್ಲಿ ಜತೆಗೂಡುವವರು ಹಲವರು, ಆತ್ಮೀಯರಾಗುವವರು ಕೆಲವರು, ಇದ್ದಕ್ಕಿದ್ದಂತೆ ದೂರವಾಗುವವರು ಮತ್ತೊಂದಷ್ಟು ಜನ. ಗೊತ್ತುಗುರಿಯಿರದೆ ಸಾಗುತ್ತಿರುವ ಜೀವನಯಾನದ ಮರ್ಮವನ್ನು ತಿಳಿಯಲು ಪ್ರಯತ್ನಿಸಬೇಕು. ಆದ್ದರಿಂದ ಆತ್ಮಾನಂದ ಹೊಂದಲು ಆಂತರ್ಯವನ್ನು ಸಜ್ಜುಗೊಳಿಸಬೇಕು.

ಅದ್ಭುತ ಸಂಯೋಜನೆಗೆ ಒಳಪಟ್ಟ ಈ ಲೋಕವು ಪರಬ್ರಹ್ಮನ ಲೀಲಾವಿನೋದಕ್ಕೆ ಒಳಪಟ್ಟಿದೆ. ಆತ್ಮ ಪರಮಾತ್ಮನನ್ನರಸಿ ಸಾಗುವ ಅವಧಿಯೇ ಮನುಷ್ಯ ಬದುಕು. ಈ ಸತ್ಯವನ್ನರಿತವರು ಸಂಯಮಿಗಳಾಗಿರುತ್ತಾರೆ, ಲೋಕಹಿತ ಬಯಸುತ್ತಾರೆ. ದೇವನ ಕಣ್ಗಾವಲಲ್ಲೇ ಜೀವಜಗತ್ತು ಬಾಳುತ್ತಿದೆ ಎನ್ನುವ ನಂಬಿಕೆ ಅಚಲವಾಗಿದ್ದರೆ ಜನ ಭ್ರಷ್ಟರಾಗುವುದಿಲ್ಲ. ಆತ್ಮಸಾಕ್ಷಿಗೆ ಅಂಜಿ ನಡೆಯುತ್ತಾರೆ. ಕಾಯುವ ದೇವನು ಜತೆಗಿದ್ದಾನೆ ಎಂಬುದು ಬದುಕಿನ ಧೈರ್ಯವಾಗುತ್ತದೆ. ತನ್ನಿಂದ ಆತನಿಗೆ ಅಪಚಾರ ಆಗಬಾರದು ಎಂಬ ಎಚ್ಚರವೂ ಭಯ-ಭಕ್ತಿಯಿಂದ ನಡೆದುಕೊಳ್ಳುವಂತೆ ಮಾಡುತ್ತದೆ. ಹಾಗೆಯೇ ಎಲ್ಲರಲ್ಲೂ, ಎಲ್ಲೆಡೆ ಭಗವದಂಶವಾದ ಆತ್ಮನನ್ನೇ ಕಾಣತೊಡಗಿದರೆ ವಿನಯದ, ಪ್ರೇಮಭಾವದ ಒಡನಾಟ ಸಾಧ್ಯ. ಅದು ಅವರ ಸಹಜ ಸ್ವಭಾವ. ಅದೇ ರೀತಿ ಪ್ರಾಕೃತಿಕವಾಗಿಯೋ, ಸ್ವಯಂಕೃತ ಪ್ರಮಾದಕ್ಕೋ ಸಂಕಷ್ಟಗಳಿಗೆ ಒಳಗಾದವರನ್ನು, ನೋವಿನಲ್ಲಿ ಕಂಗೆಟ್ಟವರನ್ನು ದಯೆಯಿಂದ ಕಾಣುವುದು, ನೆರವಾಗುವ ಸಂವೇದನೆಯೂ ವ್ಯಕ್ತಿತ್ವದ ಭಾಗವಾಗುತ್ತದೆ.

ಹೀಗೆ ಲೋಕದ ಒಳಿತಿಗಾಗಿ ಶ್ರಮಿಸಿದರೂ ಜನಸಂದಣಿಯಿಂದ ದೂರವುಳಿಯುವ ಸ್ಥಿರಚಿತ್ತ ಹೊಂದಬೇಕು. ಅಂದರೆ ಸ್ನೇಹ-ಬಾಂಧವ್ಯಗಳ ಮೋಹಪಾಶಕ್ಕೆ ಸಿಲುಕದೆ ಅಂಗತರಂಗದಲ್ಲಿ ಜಗದ ವ್ಯಾಪಾರದಿಂದ ದೂರವುಳಿದು, ಬಹಿರಂಗದಲ್ಲಿ ಲೋಕವ್ಯವಹಾರಕ್ಕೆ ಸಹಕಾರಿಯಾಗಿರಬೇಕು. ಜಗತ್ತು ಅನೇಕ ಆಕರ್ಷಣೆ ಒಡ್ಡಿ ಮನದ ದೃಢತೆಯನ್ನು ಪರೀಕ್ಷಿಸುತ್ತದೆ. ಸೋಂಕುರೋಗಗಳಂಥ ಜಗದ ಆಕರ್ಷಣೆಗಳಿಂದ ಮುಕ್ತರಾಗುವುದು ಸುಲಭವಲ್ಲ. ಜನರ ನಡುವೆ ಮಿಳಿತವಾದಷ್ಟು ಸೋಂಕಿಗೊಳಗಾಗಿ ಮನಸ್ಸು-ಬದುಕು ಹದಗೆಡುತ್ತದೆ. ಹಾಗಾಗಿ ನಿರ್ಮಮಭಾವದಿಂದ ಬಾಳುವುದನ್ನು ರೂಢಿಸಿಕೊಳ್ಳಬೇಕು.

ಈ ನಿಸ್ಸಂಗತ್ವವು ಎಷ್ಟು ದೃಢವಾಗಬೇಕೆಂದರೆ ಸಾಕಿ ಸಲಹಿದವರ ಬಗೆಗೂ ಮೋಹವುದಿಸಬಾರದು. ಇದರರ್ಥ ಕರ್ತವ್ಯದಿಂದ ವಿಮುಖರಾಗಬೇಕು ಎಂದಲ್ಲ. ಹೊಣೆಗಾರಿಕೆಯನ್ನಷ್ಟೇ ನಿಭಾಯಿಸುತ್ತ ಹೆತ್ತವರ ಮಮತೆಯನ್ನು ನಿರ್ಲಕ್ಷಿಸುವುದಲ್ಲ. ಆ ಮಮತೆ-ವಾತ್ಸಲ್ಯಗಳು ಇಹದ ಬದುಕಿನಲ್ಲಿ ಪರವಶರಾಗುವಂತೆ ಮಾಡಬಾರದು. ಹೆತ್ತವರು, ಪೋಷಕರೂ ಮಮತೆಯ ಎಳೆಗಳಾಗಿ ಕಾಡದಂತೆ ಮನಸ್ಸನ್ನು ದೃಢಗೊಳಿಸಬೇಕು. ಸಾಧನೆಯ ಹಾದಿಗೆ ಹಿರಿಯರ ಅನುಭವ ಬೆಳಕಾಗಬೇಕು. ಹೀಗೆ ಲೋಕವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೂ ಅಂತರಂಗದಲ್ಲಿ ತಟಸ್ಥರಾಗಿದ್ದು ಲೋಕಾನುಭವದ ಮೂಲಕ ಸಂಸ್ಕಾರಗೊಳ್ಳುವುದೇ ಜೀವನದ ಪರಮ ಉದ್ದೇಶ. ಪ್ರತಿ ಕ್ಷಣ ಆತ್ಮಶೋಧನೆಗೆ ಒಳಪಟ್ಟರೆ ಮೂಲತತ್ತ್ವದ ಸಾಕ್ಷಾತ್ಕಾರ ಸಾಧ್ಯ. ಇಹಲೋಕದ ಬಾಳುವೆಯ ಮೂಲವನ್ನು ಅರಸುವ ಪುಟ್ಟ ಪ್ರಯತ್ನವೂ ಆತ್ಮೋನ್ನತಿಗೆ ಸಹಾಯಕ.