ನ್ಯೂಸ್

ಕಗ್ಗದ ಬೆಳಕು; ಜೀವನದ ಸ್ವಾರಸ್ಯಮಯ ರಹಸ್ಯ

ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ |

ಸ್ವಾರಸ್ಯಹೀನವೆನ್ನುವರೆ ಜೀವಿತವ? |

ಪೌರುಷ ಪ್ರೇಮ ಸೌಂದರ್ಯಗಳಂತೆಯೇ |

ಸ್ವಾರಸ್ಯವೋ ರಹಸ್ಯ - ಮಂಕುತಿಮ್ಮ || 

‘ಸಾರಸುಖರಸದ ನಿಧಿಯಾದ ಪರಬ್ರಹ್ಮನಿರುವಾಗ, ಜೀವಿತವನ್ನು ಸ್ವಾರಸ್ಯಹೀನ ಎನ್ನುವುದೇನು? ಪೌರುಷ, ಪ್ರೇಮ, ಸೌಂದರ್ಯಗಳ ಹಾಗೆಯೇ ರಹಸ್ಯದಲ್ಲೂ ಸ್ವಾರಸ್ಯವಿದೆ’ ಎನ್ನುತ್ತದೆ ಈ ಕಗ್ಗ.

ಪ್ರಸ್ತುತ ಸಮಾಜವು ಅಸಹನೆ-ಅತೃಪ್ತಿಗಳಿಂದ ಧುಮುಗುಡುವ ಮುಖಗಳಿಂದ, ಸೋತ ಶೋಕತಪ್ತ ಮನಸ್ಸುಗಳಿಂದ ತುಂಬಿಹೋಗಿದೆ. ಬದಲಾದ ಕಾಲ, ಕಾಡುವ ಸಮಸ್ಯೆ, ನಷ್ಟ-ಕಷ್ಟಗಳ ಬಗೆಗೆಯೇ ಪ್ರತಿಯೊಬ್ಬರ ಮಾತೂ ಇರುತ್ತದೆ. ಜೀವನವು ರಸಹೀನವೆಂಬ ಯಾರದೋ ಅಭಿಪ್ರಾಯವನ್ನು ಪರಾಮಶಿಸದೆಯೇ, ಬದುಕು ಬರಡೆಂದು ಮುಖ ಬಾಡಿಸಿಕೊಂಡು ಬಾಳುವವರೂ ಹಲವರು.

ಪ್ರಪಂಚವು ವಿಸ್ಮಯಗಳ ಆಗರ. ಸೂರ್ಯೋದಯ-ಸೂರ್ಯಾಸ್ತ, ನೀಲಾಗಸದಲ್ಲಿ ತೇಲುವ ಮೇಘಗಳು, ಸುರಿವ ಮಳೆ, ಪ್ರಾಣಿ-ಪಕ್ಷಿ ಸಂಕುಲ, ಹೂವು-ಹಣ್ಣು, ಮರ-ಗಿಡ, ನದಿ-ಸಾಗರ ಹೀಗೆ ನಿಸರ್ಗವು ರಮ್ಯತೆಯ ತಾಣ. ಈ ಸೌಂದರ್ಯವನ್ನು ಪ್ರಾಣಿ-ಪಕ್ಷಿಗಳು ಕಾಣಲಾರವು, ವಿವೇಕವುಳ್ಳ, ಭಾವನೆಗಳುಕ್ಕುವ ಮನುಷ್ಯನಿಗೆ ಗೋಚರಿಸುತ್ತದೆ. ಪಂಚೇಂದ್ರಿಯಗಳ ಮೂಲಕ ಮನಸ್ಸಿಗಿಳಿದ ಚೆಲುವು ಅವರ್ಣನೀಯ ಅನುಭವ ನೀಡುತ್ತದೆ. ಅಂತರಂಗವು ಬಾಹ್ಯಪ್ರಪಂಚದ ಸಾರದೊಡನೆ ಅನುಸಂಧಾನಗೊಂಡಾಗ ರಸವು ಹುಟ್ಟುತ್ತದೆ.

ಸೌಂದರ್ಯವನ್ನು ಕಾಣುತ್ತ ತನ್ಮಯವಾಗುವ ಮನಸ್ಸು ಆನಂದದಿಂದ ಮೌನಕ್ಕೆ ಜಾರುತ್ತದೆ. ತನ್ನ ಸುತ್ತಲಿರುವ ಸೃಷ್ಟಿಯನ್ನರಿಯಲು ಯತ್ನಿಸುತ್ತದೆ. ಜಗದ ಅನುಪಮ ಸೌಂದರ್ಯಗಳಲ್ಲಿ ಪರಬ್ರಹ್ಮ ಸ್ವರೂಪವಿರುವುದು ಈ ಯತ್ನದಿಂದ ಮನನವಾಗುತ್ತದೆ. ಹೀಗೆ ಪರಬ್ರಹ್ಮನು ಸರ್ವವ್ಯಾಪಿಯಾಗಿದ್ದಾನೆ ಎಂದ ಮೇಲೆ ಈ ಜೀವನವು ಸ್ವಾರಸ್ಯಹೀನವಾಗಲು ಹೇಗೆ ಸಾಧ್ಯ?

ಕ್ಷುಲ್ಲಕ ವಿಚಾರಗಳ ಮೂಲಕ ಕ್ಷಣಿಕ ಸಂತೋಷವನ್ನು ಪಡೆಯುವ ಅಜ್ಞಾನಿಗಳು ಸದಾ ಅತೃಪ್ತರಾಗಿರುತ್ತಾರೆ. ತಿನ್ನುವ, ಕುಡಿಯುವ, ಅಲೆಯುವ, ಕಿರುಚುವ, ಕುಣಿಯುವ ವಿಚಿತ್ರ ನಡವಳಿಕೆಯ ಕೃತಕ ಬಾಳುವೆಗೆ ಜೀವನವು ಎಂದೂ ಸ್ವಾರಸ್ಯವೆನಿಸದು. ಸಂತೋಷದ ಹುಡುಕಾಟದಲ್ಲೇ ಆಯುಷ್ಯ ಕಳೆದುಹೋಗಿರುತ್ತದೆ. ಜೀವನದ ಮಹತ್ವವನ್ನು ಅರಿಯದವನು ಪ್ರತಿನಿತ್ಯ ಕೊರಗುತ್ತ, ಸಿಡಿಮಿಡಿಗುಟ್ಟುತ್ತ ರಸಮಯ ಕ್ಷಣಗಳನ್ನು ಕಳೆದುಕೊಳ್ಳುತ್ತಿರುತ್ತಾನೆ.

ಯಾರ ಬದುಕೂ ಅವರವರ ಕಲ್ಪನೆಯಂತೆಯೇ ಇರುವುದಿಲ್ಲ. ಎಲ್ಲವೂ ಭಗವಂತನ ಸಂಕಲ್ಪದಂತೆ, ನಿರ್ಧಾರದಂತೆಯೇ ನಡೆಯುತ್ತವೆ. ಪ್ರಾಣಿ-ಪಕ್ಷಿಗಳಿಗೆ ಈ ಅರಿವಿಲ್ಲದೆ ಇದ್ದರೂ ತಮ್ಮ ಮುಗ್ಧತೆಯಲ್ಲಿ ಆನಂದವಾಗಿಯೇ ಇರುತ್ತವೆ. ಎಲ್ಲವನ್ನೂ ತಿಳಿದಿದ್ದೇನೆಂಬ ಹಮ್ಮಿನಲ್ಲಿರುವ ಮನುಷ್ಯನು ತನ್ನ ಅರೆಬರೆ ತಿಳಿವಳಿಕೆಯಿಂದಾಗಿ ನಿಯಾಮಕಶಕ್ತಿಯ ಬಗೆಗೆ ಸಂದೇಹದಿಂದಿರುತ್ತಾನೆ. ಹಾಗಾಗಿ ಗೊಂದಲದಿಂದ ಬಳಲುತ್ತಾನೆ.

ಜೀವನದಲ್ಲಿ ಪ್ರಯತ್ನದಿಂದ ಹೋರಾಡಿ ಸಾಧಿಸಿದಾಗ ಅವ್ಯಕ್ತ ಆನಂದದ ಜತೆಗೆ ಜೀವನವು ಆಪ್ತವೆನ್ನಿಸುತ್ತದೆ. ಹೀಗೆಯೇ ಪರಿಶುದ್ಧ ಪ್ರೇಮವೂ ವ್ಯಕ್ತಿಯನ್ನು ಜೀವನ್ಮುಖಿಯಾಗಿಸಿ ಮನಃಶಾಂತಿಗೆ ಕಾರಣವಾಗುತ್ತದೆ. ಪ್ರಾಕೃತಿಕ ಸೌಂದರ್ಯ ವೀಕ್ಷಿಸಿದಾಗಲೂ ಆಶ್ಚರ್ಯ, ಹರ್ಷಗಳಲ್ಲಿ ಮನಸ್ಸು ಮೂಕವಾಗುತ್ತದೆ. ಮನಸ್ಸು ಅಲೆದಾಟ ನಿಲ್ಲಿಸಿ ಆ ರಸಾಸ್ವಾದನೆಯಲ್ಲಿ ತಲ್ಲೀನವಾಗುತ್ತದೆ. ಇದೇ ರೀತಿ ಎಲ್ಲದಕ್ಕೂ ಕಾರಣನಾಗಿರುವ ಪರಬ್ರಹ್ಮನ ಸೃಷ್ಟಿರಹಸ್ಯವನ್ನು ತಿಳಿಯುವುದಕ್ಕೆ ಪ್ರಯತ್ನಿಸಿದರೆ ಅದು ಅಮಿತ ಆನಂದವನ್ನು ಕರುಣಿಸುತ್ತದೆ.

ಒಂದೊಂದೇ ರಹಸ್ಯವನ್ನು ತೆರೆಯುತ್ತ ಹೋದಂತೆ ಕೌತುಕಗಳಲ್ಲಿ ಜೀವ ನಲಿಯುತ್ತದೆ, ತನ್ನ ತಾನರಿಯುತ್ತದೆ. ಇದಕ್ಕೆ ಅಂತರಂಗವು ಸಂಸ್ಕಾರಗೊಳ್ಳಬೇಕು. ಕಾಣುವ ಕಂಗಳಲ್ಲಿ ಅರಿವಿನ ಬೆಳಕಿರಬೇಕು. ತಾನೂ ಸೇರಿದಂತೆ ಎಲ್ಲವೂ ಭಗವಂತನ ಸೃಷ್ಟಿ ಎನ್ನುವ ಸ್ಪಷ್ಟ ಜ್ಞಾನ, ಜೀವನವನ್ನು ಸ್ವಾರಸ್ಯಪೂರ್ಣವಾಗಿಸುತ್ತದೆ. ಧನ್ಯ ಸಂದರ್ಭಗಳನ್ನು ಮತ್ತೆಮತ್ತೆ ಕರುಣಿಸಿ ಆತ್ಮಾನಂದವನ್ನು ನೀಡುತ್ತದೆ.