ಎಷ್ಟು ವಿಧದ ಯಂತ್ರಗಳು, ಎಷ್ಟು ರಸಮಿಶ್ರದಿಂದ ಎಷ್ಟು ಆದಿಭೂತಗಳು ಒಟ್ಟು ಸೇರಿ ಪರಿಪಾಕಗೊಂಡು ಮನುಷ್ಯನು ಸೃಷ್ಟಿಯಾಗಿ ದ್ದಾನೆ. ಪ್ರಕೃತಿಯ ಸೃಷ್ಟಿಕಾರ್ಯದಲ್ಲಿ ಮನುಷ್ಯನು ಸೃಷ್ಟಿಶೈಲದ ಶಿಖರದಲ್ಲಿದ್ದಾನೆ, ಪರಮಸಿದ್ಧಿಯಾಗಿದ್ದಾನೆ ಎನ್ನುತ್ತದೆ ಈ ಕಗ್ಗ.
ಪರಸ್ಪರ ಸಂಯೋಜಿತವಾಗಿರುವ ಸೃಷ್ಟಿಯು ಅದ್ಭುತವಾಗಿ ರಚಿಸಲ್ಪಟ್ಟಿದೆ. ಎತ್ತರದ ಪರ್ವತಶ್ರೇಣಿ, ಹಸಿರುಹಬ್ಬಿದ ಕಾಡು, ತುಂಬಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತ, ಮೊರೆಯುವ ಸಾಗರ, ಬೆಳಕೀವ ಸೂರ್ಯ, ಚಂದ್ರ, ತಾರಗೆಗಳು, ಹರಿದಾಡುವ ಮೋಡಸಾಲು, ಹಲವು ಬಣ್ಣಗಳಿಂದ ಕಂಗೊಳಿಸುವ ಹೂವು, ಹಲವು ಬಗೆಯ ಖಗ-ಮಿಗಗಳು ಹೀಗೆ ಹೆಸರಿಸುತ್ತಾ ಹೋದರೆ ಸೃಷ್ಟಿಯ ಅನಂತ ರೂಪಗಳು ಬೆರಗು ಮೂಡಿಸುತ್ತವೆ. ಪ್ರತಿಯೊಂದರಲ್ಲೂ ವೈವಿಧ್ಯ ಇದೆ, ಅದರದ್ದೇ ಆದ ವಿಶೇಷತೆ ಇದೆ. ಹೀಗೆ ಜೀವ-ಜಡ ರೂಪಗಳನ್ನೊಳಗೊಂಡ ಸೃಷ್ಟಿಯಲ್ಲಿ ಎಲ್ಲದಕ್ಕಿಂತಲೂ ಹೆಚ್ಚು ವಿಕಸಿತವಾದವನು ಮನುಷ್ಯ. ಭಾವ-ಬುದ್ಧಿಗಳನ್ನು ಉಪಯೋಗಿಸಬಲ್ಲವನಾಗಿರುವುದರಿಂದ ಉಳಿದ ಜೀವಿಗಳನ್ನು ಹಿಂದಿಕ್ಕಿ ಸೃಷ್ಟಿ ಶಿಖರದ ಅಗ್ರಸ್ಥಾನದಲ್ಲಿ ನಿಲ್ಲಲು ಅರ್ಹನಾಗಿದ್ದಾನೆ.
ಮನುಷ್ಯನ ದೇಹದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಉಸಿರಾಟ ಕ್ರಿಯೆ, ರಕ್ತಪರಿಚಲನೆ, ಜೀರ್ಣಾಂಗ ವ್ಯೂಹ, ನರವ್ಯೂಹಗಳು, ಎಲುಬು, ಸ್ನಾಯು ಮುಂತಾದ ಅಂಗಗಳು, ಎಲ್ಲವನ್ನೂ ನಿಯಂತ್ರಿಸುವ ಮಿದುಳು ಇವೆಲ್ಲವೂ ಸಂಯೋಜಿತವಾಗಿರುವುದು ಹೇಗೆ? ಅಚ್ಚರಿಯೆಂದರೆ ಇವು ಯಾವುವು ವ್ಯಕ್ತಿಯ ನಿಯಂತ್ರಣದಲ್ಲಿಲ್ಲದೆಯೇ ವ್ಯವಸ್ಥಿತವಾಗಿ ನಡೆಯುತ್ತಿರುತ್ತವೆ. ಮನುಷ್ಯನ ದೇಹವಷ್ಟೇ ಅಲ್ಲ, ಎಲ್ಲಾ ಪ್ರಾಣಿಗಳ ದೇಹವೂ ಹೀಗೆಯೇ ಕಾರ್ಯಾಚರಿಸುತ್ತದೆ. ಆದರೆ ಮನುಷ್ಯನು ತಿಂದುಂಡು ಮಲಗುವುದಕ್ಕಷ್ಟೇ ಸೀಮಿತನಾಗಿಲ್ಲ. ಆತನಲ್ಲಿ ಹೊಟ್ಟೆಯ ಹಸಿವಷ್ಟೇ ಇರುವುದಲ್ಲ, ಅದನ್ನೂ ಮೀರಿದ ಮನಸ್ಸಿನ ಹಸಿವೂ ಇದೆ. ಸುತ್ತಲಿನ ಪರಿಸರಕ್ಕೆ, ಪರಿಸ್ಥಿತಿಗಳಿಗೆ ವ್ಯಕ್ತಿಯು ತನ್ನದೇ ರೀತಿಯಲ್ಲಿ ಸ್ಪಂದಿಸುತ್ತಾನೆ. ಶೃಂಗಾರ, ಹಾಸ್ಯ, ಕರುಣವೇ ಮೊದಲಾದ ನವರಸಗಳು ಅವನಂತರಂಗದಲ್ಲಿ ಭಾವಗಳಾಗಿ ಚಿಮ್ಮುತ್ತವೆ. ರಸೋತ್ಕರ್ಷದಿಂದಾಗಿ ಮನಸ್ಸು ಹದವಾಗುತ್ತದೆ. ಜೊತೆಗೆ ವ್ಯಕ್ತಿಯು ಬುದ್ದಿಯನ್ನುಪಯೋಗಿಸಿ ಯೋಚಿಸಬಲ್ಲ, ಮುಂದಾಗುವುದನ್ನು ಊಹಿಸಬಲ್ಲ, ವಿವೇಚಿಸಿ ಸರಿಯಾದ ನಿರ್ಧಾರವನ್ನೂ ಮಾಡಬಲ್ಲ. ಮನುಷ್ಯನೂ ಸೇರಿದಂತೆ ಸರ್ವ ಸೃಷ್ಟಿಯು ಪಂಚಮಹಾಭೂತಗಳು ಅಥವಾ ಆದಿಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ದಿಂದ ನಿರ್ವಿುತವಾಗಿದೆ. ಇವೆಲ್ಲದರ ಒಟ್ಟು ಸಾರವಾಗಿ, ಸೃಷ್ಟಿಯ ಪರಮ ಸಿದ್ಧಿಯಾಗಿ ಮನುಷ್ಯನಿದ್ದಾನೆ. ಸೃಷ್ಟಿಯಲ್ಲೇ ಅದ್ವಿತೀಯನಾಗಿದ್ದಾನೆ.
ಹೀಗೆ ಮನುಷ್ಯನು ಅಸಾಮಾನ್ಯನಾಗಿರುವುದರಿಂದಲೇ ಶಿಲಾಯುಗದಲ್ಲಿ ಪ್ರಾಣಿ ಸಹಜವಾಗಿಯೇ ಬದುಕುತ್ತಿದ್ದ ಮಾನವನು, ಪ್ರಕೃತಿಯೊಡ್ಡುವ ಸವಾಲುಗಳಿಗೆ ಹೊಂದಿಕೊಂಡು ತಲೆಬಾಗದೆ ಅದನ್ನು ಎದುರಿಸುವುದನ್ನು ರೂಢಿಸಿಕೊಂಡ. ಪ್ರತಿಯೊಂದನ್ನು ಶೋಧಿಸುತ್ತಾ. ತನ್ನಲ್ಲಿಯೇ ಪ್ರಶ್ನಿಸಿಕೊಳ್ಳುತ್ತಾ ಸೃಜನಾತ್ಮಕವಾಗಿ ಬದುಕಿದ. ಪ್ರಕೃತಿಯನ್ನು ತನ್ನ ಪ್ರತಿಭೆ ಮತ್ತು ಬುದ್ಧಿವಂತಿಕೆಯಿಂದ ಸಂಸ್ಕೃತಿಯಾಗಿ ಬದಲಾಯಿಸಿದ. ಇದರಿಂದಾಗಿ ವಿಜ್ಞಾನ, ಸಾಹಿತ್ಯ, ಸಾಮಾಜಿಕ ಮುಂತಾದ ಎಲ್ಲಾಕ್ಷೇತ್ರಗಳಲ್ಲೂ ಆವಿಷ್ಕಾರಗಳು, ಹೊಸತನಗಳು ಕಾಣಿಸಿಕೊಂಡವು. ವೈದ್ಯಕೀಯದಿಂದ ತೊಡಗಿ ಖಗೋಳದವರೆಗೂ ಮನುಷ್ಯ ಮತಿಯು ಮಾಡಿರುವ ಸಾಧನೆ ಸಾಮಾನ್ಯವಾದುದಲ್ಲ. ಪೂರ್ತಿ ಸೃಷ್ಟಿಯನ್ನೇ ತನಗೆ ಬೇಕಾದಂತೆ ಬದಲಾಯಿಸಿಕೊಳ್ಳಬಲ್ಲ, ಅಲ್ಲಿರುವ ಸಂಪನ್ಮೂಲಗಳಿಂದಲೇ ನೂತನತೆಯನ್ನು ಶೋಧಿಸಿ ಪ್ರಕಟಿಸಬಲ್ಲ ಮನುಷ್ಯನನ್ನು ರೂಪಿಸಿದ್ದು ಕೂಡಾ ಇದೇ ಸೃಷ್ಟಿ. ಉಳಿದೆಲ್ಲ ಜೀವ-ಜಡ ರೂಪಗಳಿಗಿಂತಲೂ ವಿಶಿಷ್ಟನಾಗಿ, ಬುದ್ಧಿಬಲದಿಂದ ಜಗತ್ತನ್ನೇ ನಿಯಂತ್ರಿಸಬಲ್ಲವನಾದುದರಿಂದ ಈತನು ಪ್ರಕೃತಿಯ ಸೃಷ್ಟಿಯಲ್ಲೆಲ್ಲಾ ಅಗ್ರಮಾನ್ಯ, ಸೃಷ್ಟಿ ಶಿಖರದ ಎತ್ತರದಲ್ಲಿ, ಮುಂಚೂಣಿಯಲ್ಲಿ ಇರಲು ಅರ್ಹ.
ಹೀಗೆ ಸೃಷ್ಟಿಯಲ್ಲೇ ಅದ್ವಿತೀಯನಾಗಿರುವ ಮನುಷ್ಯನು ತನ್ನ ಹೊಣೆಯನ್ನು ತಿಳಿದಿದ್ದಾನೆಯೇ? ಸೃಷ್ಟಿಯ ಹಿಂದಿರುವ ಅವ್ಯಕ್ತ ಶಕ್ತಿಯನ್ನು ಗ್ರಹಿಸಬಲ್ಲನೇ? ಖಂಡಿತಾ ಇಲ್ಲ. ಎಲ್ಲವೂ ತನಗಾಗಿ, ತನಗೆ ಬೇಕಾದಂತೆ, ತನ್ನದೆ ಎಂದು ಅಹಂಕಾರದಿಂದ ಮೆರೆಯುತ್ತಿದ್ದಾನೆ. ಹಾಗಾಗಿಯೇ ಪ್ರಕೃತಿಯು ವಿಕೃತಿಗೆ ಒಳಗಾಗುತ್ತಿದೆ. ಸೃಷ್ಟಿಯ ಪರಮ ಸಿದ್ಧಿಯೇ ಅದಕ್ಕೆ ಮಾರಕವಾಗಿದೆ. ಯಾರು ವಿನಮ್ರನಾಗಿ ಜಗತ್ತನ್ನು ಅವಲೋಕಿಸಬಲ್ಲನೋ, ಸಹೃದಯತೆಯಿಂದ ನಡೆದುಕೊಳ್ಳಬಲ್ಲನೋ ಅವನಲ್ಲಿ ಆತ್ಮಜ್ಞಾನವು ವಿಕಸಿತವಾಗಿರುತ್ತದೆ. ಜನನ-ಮರಣಗಳ ನಡುವಿನ ಜೀವನದ ಮಹತ್ವವನ್ನರಿತು ಘನತೆಯಿಂದ ನಡೆದುಕೊಳ್ಳುತ್ತಾನೆ. ಸಾಗರದಲೆಗಳು ಮರಳಿಸಾಗರವನ್ನೇ ಸೇರುವಂತೆ ತಾನೂ ಅನಂತದಲ್ಲಿ ಲೀನವಾಗಬೇಕಾದವನು ಎನ್ನುವುದನ್ನು ಅರ್ಥಮಾಡಿಕೊಂಡಿರುತ್ತಾನೆ. ಹೀಗೆ ಯಾರು ತನ್ನ ನೆಲೆಯನ್ನರಿತು, ವಿವೇಕಯುತವಾಗಿ ಮತ್ತು ವಿಶಾಲವಾಗಿ ಯೋಚಿಸುತ್ತಾನೋ ಆತನು ಸಾರ್ಥಕ ಜೀವನವನ್ನು ಹೊಂದುತ್ತಾನೆ, ಜಗತ್ತಿಗೆ ಆದರ್ಶಪ್ರಾಯನಾಗುತ್ತಾನೆ.
ಲೇಖಕರು ಉಪನ್ಯಾಸಕರು, ಕವಯಿತ್ರಿ