ನ್ಯೂಸ್

ಕಗ್ಗದ ಬೆಳಕು; ಜೀವಿತವೆಂಬ ಮಹಾ ಸಮರಗಾಥೆ

ಭಾವದಾವೇಶದಿಂ ಮನವಶ್ವದಂತಿರಲಿ |

ಧೀವಿವೇಚನೆಯದಕೆ ದಕ್ಷರಾಹುತನು ||

ತೀವಿದೊಲವಿನ ದಂಪತಿಗಳಾಗೆ ಮನಬುದ್ಧಿ |

ಜೀವಿತವು ಜೈತ್ರಕಥೆ - ಮಂಕುತಿಮ್ಮ ||

‘ಭಾವಾವೇಶದಲ್ಲಿ ಮನಸ್ಸು ಕುದುರೆಯ ಹಾಗಿರಲಿ, ಧೀವಿವೇಚನೆ ಅದಕ್ಕೆ ದಕ್ಷನಾದ ಸವಾರನಂತೆ ಇರಲಿ. ಪ್ರೀತಿ ತುಂಬಿದ ದಂಪತಿಯಂತೆ ಮನಸ್ಸು ಮತ್ತು ಬುದ್ಧಿ ಇದ್ದರೆ ಜೀವನವು ಗೆಲುವಿನ ಕಥೆಯಾಗುತ್ತದೆ’ ಎನ್ನುತ್ತದೆ ಈ ಕಗ್ಗ.

ವೇಗದ ಓಟ ಮತ್ತು ಚುರುಕುತನಕ್ಕೆ ಹೆಸರಾದ ಕುದುರೆ ಒಂದು ಕಾಲದಲ್ಲಿ ಮಾನವನ ಒಡನಾಡಿಯಾಗಿತ್ತು. ಕುದುರೆಯ ಶಕ್ತಿ ಸಾಮರ್ಥ್ಯವನ್ನರಿತ ಮಾನವನು ಅದಕ್ಕೆ ಕಡಿವಾಣ ಬಿಗಿದು, ಮೇಲೇರಿ ಕುಳಿತು ತನ್ನ ಇಚ್ಛೆಯಂತೆಯೇ ಮುನ್ನಡೆಸುತ್ತಿದ್ದ. ಸಮರ್ಥ ಸವಾರನು ಕುದುರೆಯ ಸ್ವಭಾವವನ್ನರಿತು, ಒಂದಿನಿತೂ ಚಂಚಲವಾಗದಂತೆ, ಅದನ್ನು ನಿಯಂತ್ರಣದಲ್ಲಿರಿಸಿಕೊಂಡು ಗುರಿ ತಲುಪುತ್ತಿದ್ದ.

ಮನುಷ್ಯನು ಬುದ್ಧಿಯನ್ನು ಬಳಸಿಕೊಂಡು ತನಗಿಂತ ಬಲಿಷ್ಠ ಪ್ರಾಣಿಗಳನ್ನು ಪಳಗಿಸಿ ಕಣ್ಗಾವಲಲ್ಲೇ ಇರಿಸಿಕೊಳ್ಳಬಲ್ಲ. ಆದರೆ ತನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮಾತ್ರ ಸೋಲುತ್ತಾನೆ. ಮನಸ್ಸು ಹುಚ್ಚೆದ್ದ ಕುದುರೆಯಂತೆ ಎಗರಾಡುತ್ತದೆ. ನೋಡುವ, ಕೇಳುವ, ರ್ಸ³ಸುವ, ಆಘ್ರಾಣಿಸುವ, ರುಚಿ ನೋಡುವ ಮೂಲಕ ಬಾಹ್ಯಪ್ರಪಂಚದೊಂದಿಗೆ ತನ್ನನ್ನು ಜೋಡಿಸಿಕೊಳ್ಳುವ ವ್ಯಕ್ತಿ, ಹೊರಜಗತ್ತಿನ ಅರಿವನ್ನಷ್ಟೇ ಪಡೆಯುವುದಿಲ್ಲ, ಅವುಗಳ ಆಕರ್ಷಣೆಗೆ ಮನಸೋತು ಇಂದ್ರಿಯಗಳ ದಾಸನಾಗಿಬಿಡುತ್ತಾನೆ.

ಯಾವುದೋ ಒಂದು ವಸ್ತುವನ್ನು ನೋಡಿದಾಗ, ಮಧುರವಾದುದನ್ನು ಕೇಳಿದಾಗ ಆ ವಸ್ತುವಿಗೆ ಸಂಬಂಧಿಸಿದ ಸಂವೇದನೆಗಳು ಇಂದ್ರಿಯಗಳ ಮೂಲಕ ಮನಸ್ಸನ್ನು ಪ್ರಚೋದಿಸುತ್ತವೆ. ಆಗ ರಾಗ-ದ್ವೇಷಾದಿ ವಿವಿಧ ಭಾವಗಳು ಕಾಣಿಸಿಕೊಳ್ಳುತ್ತವೆ. ವಿವೇಚನಾರಹಿತರಾಗಿ ಆತುರದಿಂದ ಪ್ರತಿಕ್ರಿಯಿಸುವ, ಸಂಯಮ ಕಳೆದುಕೊಳ್ಳುವ ವಿಪರ್ಯಾಸ ನಡೆದುಬಿಡುತ್ತದೆ. ಅಂಥ ಸಂದರ್ಭಗಳಲ್ಲಿ ಬುದ್ಧಿ ಎಚ್ಚೆತ್ತುಕೊಳ್ಳುತ್ತದೆ. ಅನುಭವದಿಂದಲೋ, ಹಿರಿಯರ ಅರಿವಿನಿಂದಲೋ ಪಾಠ ಕಲಿತಿದ್ದರೆ ಬುದ್ಧಿ ಸ್ವತಂತ್ರವಾಗಿ ವಿವೇಚಿಸಬಲ್ಲದು. ಆಗ ಮನಸ್ಸಿನ ಭಾವಲಹರಿಗೆ ತಾನೂ ತಲೆತೂಗುತ್ತ, ದುರಿತಗಳನ್ನೆಸಗುವ ವಿಪರೀತಗಳು ನಡೆಯಲಾರವು.

ಒಲವಿನಿಂದ ಬಾಳುವ ದಂಪತಿಯಂತೆ ಬುದ್ಧಿ ಮತ್ತು ಮನಸ್ಸು ಸಮರಸದಿಂದಿರಬೇಕು. ಮನಸ್ಸು ಬುದ್ಧಿಯನ್ನು ಪ್ರಚೋದಿಸಬೇಕು, ಬುದ್ಧಿಯು ಮನಸ್ಸನ್ನು ಲಾಲಿಸಬೇಕು. ಕಾರ್ಯೋನ್ಮುಖರಾಗುವ ಉತ್ಸಾಹ ಮೂಡಲು ಭಾವಾವೇಶವೂ ಬೇಕು. ಸಾಧಕಬಾಧಕಗಳನ್ನು ಯೋಚಿಸಿ ಸಮಂಜಸವಾದುದನ್ನು ಕೈಗೊಳ್ಳುವಂತೆ ಬುದ್ಧಿ ನಿರ್ದೇಶಿಸಬೇಕು. ಹಸುವಿನ ಪುಟ್ಟ ಕರುವು ಕೆಲವೊಮ್ಮೆ ಅತ್ಯುತ್ಸಾಹದಿಂದ ನೆಗೆದಾಡುತ್ತದೆ, ಗೊತ್ತುಗುರಿಯಿಲ್ಲದೆ ಓಡಾಡುತ್ತದೆ. ಆಗ ತಾಯಿ ಹಸು ಕರುವನ್ನು ಬಳಿಗೆ ಕರೆಯುತ್ತದೆ, ಅದರದೇ ರೀತಿಯಲ್ಲಿ ಕರುವನ್ನು ಸಂಭಾಳಿಸಲು ಪ್ರಯತ್ನಿಸುತ್ತದೆ. ಪುಟ್ಟ ಕರುವಿನಂಥ ಮನಸ್ಸನ್ನು ಬುದ್ಧಿಯು ತಾಯಿ ಹಸುವಿನಂತೆ ಜೋಪಾನ ಮಾಡುತ್ತದೆ.

ವ್ಯಕ್ತಿಯು ತನ್ನ ಮನಸ್ಸನ್ನು ತಾನೇ ಓದಬಲ್ಲವನಾದರೆ, ಅಲ್ಲಿ ಏಳುವ ಅಲೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬಲ್ಲವನಾದರೆ ವಿಹ್ವಲನಾಗಲಾರ. ಎಲ್ಲ ಸಂದರ್ಭಗಳನ್ನೂ ವಿವೇಚನೆಯಿಂದ ಎದುರಿಸಿ, ಸಮಂಜಸ ತೀರ್ವನಗಳನ್ನಷ್ಟೇ ಕೈಗೊಳ್ಳಬಲ್ಲ. ಹೀಗೆ ಭಾವ-ಬುದ್ಧಿಗಳು ಪಾಪಪ್ರಜ್ಞೆಯಿಂದ ನರಳದೆ, ಕಿತ್ತಾಡದೆ, ಪೂರಕವಾಗಿ ಒಡನಾಡುತ್ತ, ಅರಿತು ನಡೆದುಕೊಂಡರೆ ಜೀವನವು ಜೈತ್ರಕಥೆಯಾಗುತ್ತದೆ. ನೆಮ್ಮದಿ ನೆರಳಾಗಿರುತ್ತದೆ.