ಆದಿದಿವಸವದಾವುದೆಂದೆಂದುಮಿಹ ಜಗಕೆ? |
ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||
ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |
ಸೇದಿಕೊಂಡಿರೆ ಲಯವು - ಮಂಕುತಿಮ್ಮ ||
ಜಗತ್ತು ನಿರಂತರವಾಗಿ ಪರಿವರ್ತನೆಗೆ ಒಳಗಾಗುತ್ತ ಚಲನಶೀಲವಾಗಿ ಇದೆ. ಹಾಗಾಗಿಯೇ ಕಾಲದ ಓಟದಲ್ಲಿ ಪ್ರಪಂಚ ಬದಲಾದಂತೆ ಕಾಣುತ್ತದೆ, ತಿಥಿ, ನಕ್ಷತ್ರ, ಮಾಸ ಅಥವಾ ತಾರೀಖು, ತಿಂಗಳು, ವರ್ಷಗಳಲ್ಲಿ ಇಷ್ಟು ಅವಧಿ ಎಂದು ಲೆಕ್ಕ ಹಾಕುತ್ತೇವೆ. ಆದರೆ ಈ ಜಗತ್ತಿನ ಮೊದಲ ದಿನ ಯಾವುದು ಎಂದು ತಿಳಿದಿದ್ದೇವೆಯೇ? ಊಹಿಸುವುದಕ್ಕಾದರೂ ಸಾಧ್ಯವೇ? ಇಲ್ಲ. ಏಕೆಂದರೆ ಎಂದೆಂದೂ ಇರುವ ಜಗತ್ತಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅದು ಶಾಶ್ವತ. ಹಾಗಾದರೆ ಪುರಾಣ ಗ್ರಂಥಗಳಲ್ಲಿ ಕಲ್ಪ, ಯುಗ, ಪ್ರಳಯ ಎಂದೆಲ್ಲ ಉಲ್ಲೇಖಿತವಾಗಿರುವ ಸೃಷ್ಟಿ-ಲಯದ ಕಥೆಗಳ ಪಾಡೇನು? ಅವು ಅಸತ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಜಗತ್ತು ಮತ್ತು ಜೀವಗಳ ಸೃಷ್ಟಿ-ಲಯದ ಕತೆಗಳು ಸುಲಭ ಬೋಧನೆಗೆಗಾಗಿ ರೂಪಿತವಾಗಿವೆ, ಸೂಕ್ಷ್ಮ ವಿಚಾರ ಮನದಟ್ಟಾಗುವುದಕ್ಕೆ ಕಥೆಯನ್ನು ಆ ತೆರನಾಗಿ ಹೆಣೆಯಲಾಗಿದೆ. ಆ ಕಥೆಗಳನ್ನೂ ಪರಾಮಶಿಸಿದರೆ ಅದೂ ಮೂಲ ಸತ್ಯವನ್ನೇ ಹೇಳುತ್ತಿರುವುದು ಸ್ಪಷ್ಟವಾಗುತ್ತದೆ.
ಅವ್ಯಕ್ತನೂ, ನಿರಾಕಾರನೂ ಆದ ಪರಬ್ರಹ್ಮನ ವ್ಯಕ್ತರೂಪವೇ ಈ ಜಗತ್ತು. ಜಗದ ಆಗುಹೋಗುಗಳೆಲ್ಲ ದೈವಲೀಲೆ. ಆಮೆಯೊಂದು ತನ್ನ ಕೈ-ಕಾಲು ಮತ್ತು ತಲೆಯನ್ನು ಹೊರಮುಖವಾಗಿ ಚಾಚಿದ್ದರೆ ಅದು ಸೃಷ್ಟಿ. ಅದು ಕ್ರಿಯಾಶೀಲವಾಗಿರುವ ಹೊತ್ತಿನಲ್ಲಿ ಹೀಗಿರುತ್ತದೆ. ಒಂದುವೇಳೆ ಒಳಮುಖವಾಗಿ ಎಳೆದುಕೊಂಡಿದ್ದರೆ ಚಿಪ್ಪಿನ ಮರೆಯಲ್ಲಿ ಕೈ-ಕಾಲು, ತಲೆಗಳಿದ್ದರೂ ಕಾಣಿಸಲಾರವು. ಅದುವೇ ಲಯ. ಒಂದರ್ಥದಲ್ಲಿ ಜಗತ್ತು ಇದೆ ಎಂದರೆ ಇದೆ, ಇಲ್ಲವೆಂದರೆ ಇಲ್ಲ ಎಂಬ ಸ್ಥಿತಿ. ಗ್ರಹಿಸುವ ಮತಿಯ ಇತಿಮಿತಿಗೆ ಹೊಂದಿಕೊಂಡು ಸೃಷ್ಟಿ-ಸ್ಥಿತಿ-ಲಯವು ಅರ್ಥವಾಗುತ್ತದೆ.
ಜಗದ ಸೃಷ್ಟಿ, ಸ್ಥಿತಿ, ವಿನಾಶ- ಎಲ್ಲವೂ ಮಾಯಾವಿಲಾಸ. ಕನಸಿನಲ್ಲಿ ಮೃಷ್ಠಾನ್ನ ಭೋಜನ ಮಾಡಿದ ವ್ಯಕ್ತಿ ಆ ಸಮಯದಲ್ಲಿ ಸಂತೋಷವಾಗಿರುತ್ತಾನೆ. ಎಚ್ಚರಾದಾಗ ಅದೇ ಸಂತೋಷ ಇರುತ್ತದೆಯೇ? ಹಸಿವು ಕಾಡದೆ? ಹಾಗೆಂದು ಉಂಡ ಹಾಗೆ ಅನುಭವವಾದದ್ದು ಸುಳ್ಳಲ್ಲ, ಕನಸನ್ನು ಮೆಲುಕು ಹಾಕುವುದು ನಡೆದಿರುತ್ತದೆ. ಹಾಗೆಯೇ ಜಗತ್ತಿನ ವ್ಯವಹಾರಗಳು ಅನುಭವಕ್ಕೆ ನಿಲುಕುವಂತಿದ್ದರೂ ಅದು ಸತ್ಯವಲ್ಲ. ಪಂಚೇಂದ್ರಿಯಗಳಿಗೆ ಗ್ರಾಹ್ಯವಾದುದನ್ನು ‘ಇದೆ’ ಎನ್ನುತ್ತೇವೆ, ಆದರೆ ಅದರಾಚೆಯೂ ಇನ್ನೇನೋ ಇರುತ್ತದೆ. ಬೀಜವು ವ್ಯಕ್ತರೂಪ ಅಂದರೆ ಸೃಷ್ಟಿ, ಅದರೊಳಗೆ ಮರವು ಅವ್ಯಕ್ತ ರೂಪದಲ್ಲಿರುತ್ತದೆ, ಅದುವೇ ಪರಬ್ರಹ್ಮ. ಚಿಮ್ಮಿ ಮರೆಯಾಗುವ ಸಾಗರದ ಅಲೆಯು ಈ ಜಗತ್ತು, ಅದಕ್ಕೆ ಆಧಾರವಾಗಿರುವ ಸಾಗರವು ಪರಬ್ರಹ್ಮಸ್ವರೂಪ. ಈ ದೃಶ್ಯ-ಅದೃಶ್ಯಗಳ ನಡುವೆ ಮಾಯೆಯ ಬಲೆ ಆವರಿಸಿರುತ್ತದೆ. ಅರಿವು ಎಚ್ಚೆತ್ತರೆ ಈ ಬಲೆ ಕಳಚುತ್ತದೆ.
ಜಗದ ಈ ರೀತಿಯು ಸೃಷ್ಟಿ, ಪಾಲನೆ, ಲಯದ ಕಥೆಗಳಲ್ಲಿ ಸೇರಿ ಜನಸಾಮಾನ್ಯರಿಗೆ ಜೀವನದ ಮೌಲ್ಯವನ್ನು ತಿಳಿಸುತ್ತದೆ. ನಿರಾಕಾರನೂ, ನಿರ್ಭಾವುಕನೂ ಆದ ಭಗವಂತನಿಗೆ ನಾನಾ ರೂಪವನ್ನು ಕಲ್ಪಿಸಿ, ಮನುಷ್ಯ ಜೀವನದಂತೆಯೇ ದೇವನಿಗೂ ಮನೆ, ಸಂಸಾರಗಳನ್ನು ರೂಪಿಸಿ ಆರಾಧಿಸುವುದನ್ನು ಕಾಣುತ್ತೇವೆ. ದೇವಮಹಿಮೆಯನ್ನು ಸಾರುವ ಅನೇಕ ಕಥೆಗಳಿವೆ.
ಪೂರ್ತಿ ಜಗತ್ತೇ ಭಗವಂತನ ವ್ಯಕ್ತರೂಪವಾಗಿದೆ. ಆತನೇ ಅದರ ನಿರ್ವತೃವಾಗಿದ್ದಾನೆ. ಆತನ ರಕ್ಷೆಯ ಕಕ್ಷೆಯೊಳಗೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳೆಲ್ಲವೂ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಸೃಷ್ಟಿ-ಲಯಗಳೆಲ್ಲ ಅವಸ್ಥಾಂತರಗಳಷ್ಟೇ.