ಅದರಿಳಿತ ಕೊರಳ ನಾಳದ ಸದ್ದಿನಿಂದ ||
ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು |
ಅದನಿಳಿಸೆ ಶಾಂತಿಯೆಲೊ - ಮಂಕುತಿಮ್ಮ ||
‘ಹೃದಯದ ಅಬ್ಬರವಾದರೂ ಏನು? ಹೊಟ್ಟೆಯುಬ್ಬರದಂತೆಯೇ. ಕೊರಳಿನಿಂದ ಹೊರಡುವ ಸದ್ದಿನಿಂದ ಅದು ಇಳಿಯುತ್ತದೆ. ನಗು, ದುಃಖ, ಹೊಗಳುವಿಕೆ, ತೆಗಳುವಿಕೆಗಳ ಮೂಲಕ ಭಾರವನ್ನು ಇಳಿಸಿಕೊಂಡ ಹೃದಯ ಶಾಂತವಾಗುತ್ತದೆ’ ಎನ್ನುತ್ತದೆ ಈ ಕಗ್ಗ.
ಹಸಿವು ಪ್ರಾಣಿಪ್ರಪಂಚವನ್ನು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಬದುಕಿನ ದಾರಿಯಲ್ಲಿ ಮುನ್ನಡೆಸುತ್ತದೆ. ಒಂದುವೇಳೆ ಹೊಟ್ಟೆಯ ಹಸಿವು ಇಲ್ಲದೆ ಇರುತ್ತಿದ್ದರೆ ನಿರಾಸಕ್ತಿ, ಜಡತೆ, ನಿರುತ್ಸಾಹಗಳಲ್ಲಿ ಜೀವನ ನಿಸ್ಸಾರವೆನಿಸುತ್ತಿತ್ತು. ಏಕೆಂದರೆ ಮನುಷ್ಯನ ಮೂಲ ಆವಶ್ಯಕತೆಗಳಲ್ಲಿ ಅಶನಕ್ಕೆ ಮೊದಲ ಸ್ಥಾನ. ಅದನ್ನು ಪಡೆಯಲೆಂದೇ ಆತನ ಕಾಯಕ. ಆಹಾರವನ್ನು ನಿರಾಕರಿಸಿ ಬದುಕುವುದು ಸುಲಭವಲ್ಲ. ಆದರೆ ಈ ಆಹಾರಸೇವನೆ ಹಸಿವನ್ನು ನೀಗಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿಲ್ಲ. ಬಾಯಿರುಚಿಯ ಚಪಲವನ್ನು ತೀರಿಸಿಕೊಳ್ಳುವ ಉಪಾಯವೂ ಆಗಿದೆ. ಹಾಗಾಗಿಯೇ ವಿವಿಧ ಬಗೆಯ ಖಾದ್ಯಗಳು, ರಸ-ರುಚಿಗಳು ಪ್ರಚಲಿತದಲ್ಲಿವೆ. ಹೊಟ್ಟೆಬಾಕತನದಿಂದ ಸಸ್ಯಗಳನ್ನಷ್ಟೇ ಅಲ್ಲದೆ, ಭೂಮಿಯಲ್ಲಿರುವ ಎಲ್ಲ ಪ್ರಾಣಿ-ಪಕ್ಷಿಗಳನ್ನೂ ಹಸಿಯಾಗಿಯೋ, ಅರೆ ಬೇಯಿಸಿಯೋ ತಿನ್ನುವ ಮಟ್ಟಕ್ಕೆ ಮನುಷ್ಯ ಅಪಾಯಕಾರಿಯಾಗಿದ್ದಾನೆ. ಹೀಗೆ ದೇಹಪೋಷಣೆಗೆ ಅಗತ್ಯವಾದ ಪೌಷ್ಟಿಕ ಆಹಾರ ಸೇವನೆಯನ್ನು ಕಡೆಗಣಿಸಿ, ರುಚಿಗೋ, ಪರಿಮಳಕ್ಕೋ ಮನಸೋತು ಸೇವಿಸುವ ಆಹಾರದಿಂದಾಗಿ ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು ಮುಂತಾದ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಹೊಟ್ಟೆಯುಬ್ಬರದಂತೆ ಹೃದಯದಬ್ಬರವೂ ಮನುಷ್ಯನನ್ನು ಕಂಗೆಡಿಸಿ ಚಡಪಡಿಸುವಂತೆ ಮಾಡುತ್ತದೆ. ರುಚಿ ವೈವಿಧ್ಯಗಳಿರುವುದಕ್ಕಿಂತ ಅಧಿಕ ಭಾವವೈವಿಧ್ಯ ಮಾನವ ಹೃದಯದಲ್ಲಿ ಪುಟಿಯುತ್ತಿರುತ್ತದೆ. ಹೀಗೆ ಕ್ಷಣಕ್ಷಣಕ್ಕೂ ಬದಲಾಗುವ ಭಾವಗಳ ಮೇಳನಕ್ಕೆ ವ್ಯಕ್ತಿ ವಿವಿಧ ರೀತಿಯಲ್ಲಿ ಸ್ಪಂದಿಸುತ್ತಾನೆ. ನಲಿವುಕ್ಕಿದಾಗ ಗಹಗಹಿಸಿ ನಗುತ್ತಾನೆ. ಅಳುವಿನಲೆಗೆ ಸಿಕ್ಕಿ ಭೋರಿಟ್ಟು ಅಳುತ್ತಾನೆ. ಮೋಹ, ಮದ, ಭಯ, ಅನುರಾಗ ಮುಂತಾದ ವಿಭಿನ್ನ ಭಾವಗಳು ಮಾನವ ಹೃದಯದಲ್ಲಿ ಅಲೆಯಂತೆ ಎದ್ದಾಗ ಚಿತ್ರವಿಚಿತ್ರವಾಗಿ ಉದ್ಗರಿಸುತ್ತಾನೆ. ದುಃಖದಿಂದ ಗಂಟಲ ಸೆರೆಯುಬ್ಬಿ ಗದ್ಗದಿತನಾಗುವುದಕ್ಕೆ ಭಾಷೆಯ ಹಂಗಿಲ್ಲ. ಹೊಗಳುವುದಕ್ಕೆ, ತೆಗಳುವುದಕ್ಕೆ, ಹೀಯಾಳಿಸುವುದಕ್ಕೆ, ಉಪೇಕ್ಷಿಸಿ ನಡೆಯುವುದಕ್ಕೂ ಹಲವು ವಿಧದ ಅರ್ಥವಿಲ್ಲದ ಉದ್ಗಾರಗಳೇಳುತ್ತವೆ, ಆ ದನಿಗಳೇ ಅರ್ಥಪೂರ್ಣ ಮಾತುಗಳಾಗುತ್ತವೆ.
ಹೊಟ್ಟೆಯುಬ್ಬರಕ್ಕೆ ಕಾರಣವಾಗುವ ಆಹಾರಕ್ರಮಗಳಿಂದ ದೂರವಿರಬೇಕಾದುದು ಅಗತ್ಯ. ಇದೇ ರೀತಿ ಹೃದಯವನ್ನು ಕೆರಳಿಸಿಯೋ, ತಣಿಸಿಯೋ, ಮೈಮರೆಯುವಂತೆ ಮಾಡುವ ಭಾವ ತಲ್ಲಣಗಳಿಂದಲೂ ಮುಕ್ತರಾಗಬೇಕು. ಸದಾಚಾರ, ಸಚ್ಚಿಂತನೆ, ಸತ್ಸಂಗಗಳಿಂದ ಕೂಡಿದ ಜೀವನಶೈಲಿಯಿಂದ ಬದುಕು ಪಕ್ವವಾಗುತ್ತದೆ. ಸಂಯಮ, ಸಮಚಿತ್ತ ರೂಢಿಯಾಗುತ್ತದೆ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಲ್ಲರಲ್ಲೂ ಇರುತ್ತದೆ; ಪ್ರತಿ ಸನ್ನಿವೇಶಗಳಿಗೂ ಸ್ಪಂದಿಸುವ ಗುಣ ಪ್ರತಿಯೊಬ್ಬರಲ್ಲೂ ಸಹಜವಾಗಿಯೇ ಇರುತ್ತದೆ. ಆದರೆ ಈ ಸ್ಪಂದನೆ ವಿವೇಕದ ನಿಯಂತ್ರಣಕ್ಕೆ ಒಳಪಟ್ಟಿರಬೇಕು. ಭಾವೋದ್ವೇಗಕ್ಕೆ ಒಳಗಾಗಿ, ಮನಸ್ಸಿಗೆ ತೋಚಿದಂತೆ ಸ್ಪಂದಿಸಿದರೆ ಪರಿಣಾಮವು ದಾರುಣವಾಗಬಹುದು. ಹಾಗೆಂದು ಭಾವನೆಗಳನ್ನು ಅದುಮಿಟ್ಟು ಮುಖವಾಡ ಧರಿಸುವುದೂ ತರವಲ್ಲ. ಯಾವುದೇ ಒತ್ತಡಕ್ಕೆ ಒಳಗಾಗದಂತೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು, ಹದವರಿತು ಮಿಡಿಯುವುದು, ಉದ್ವೇಗದಲ್ಲೂ ಮಿತಿ ದಾಟದಿರುವ ಆತ್ಮಸಂಯಮ, ಪ್ರತಿನಿತ್ಯ ಹೃದಯಶೋಧನೆಗೆ ಒಳಪಡುವುದು ಮುಂತಾದ ಉತ್ಕೃ್ಟ ಜೀವನಶೈಲಿಯಿಂದ ಶಾಂತಚಿತ್ತ ಸಿದ್ಧಿಸುತ್ತದೆ.