ನ್ಯೂಸ್

ಕಗ್ಗದ ಬೆಳಕು: ಮನುಜನೆಂಬ ಸೃಷ್ಟಿಯ ರಹಸ್ಯ

ಕವಿತಾ ಅಡೂರು

ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |

ಮಸಕಿನಲಿ ಹುದುಗಿಹವು ಮೋಹಮೂಲಗಳು ||

ನಿಶಿ ಮುಚ್ಚಿಹುದು ದಿನಪ ಚಂದಿರರ ಹುಟ್ಟೆಡೆಯ |

ಮಿಸುಕುವ ರಹಸ್ಯ ನೀಂ-ಮಂಕುತಿಮ್ಮ ||

‘ಹುಟ್ಟು-ಸಾವಿನ ಕಾರಣವನ್ನು ಒಂದು ಮಬ್ಬು ಮುಸುಕಿದೆ. ಮೋಹಮೂಲಗಳೂ ಹೀಗೆ ಅಸ್ಪಷ್ಟವಾದುದರೊಳಗೆ ಹುದುಗಿವೆ. ಸೂರ್ಯಚಂದ್ರರ ಹುಟ್ಟಿನೆಡೆಯನ್ನು ಕತ್ತಲು ಮುಚ್ಚಿದೆ. ನೀನೂ ಈ ಎಲ್ಲ ರಹಸ್ಯಗಳಿಗೆ ಸ್ಪಂದಿಸುವ ರಹಸ್ಯವೇ ಆಗಿರುವೆ’ ಎನ್ನುತ್ತಾರೆ ಡಿ.ವಿ.ಜಿ.

ಜೀವನಪಥದಲ್ಲಿ ಎಲ್ಲರೂ ಜೊತೆಜೊತೆಯಾಗಿಯೇ ಮುನ್ನಡೆಯುತ್ತಿದ್ದೇವೆ. ಆದರೆ ಎತ್ತ ಸಾಗುತ್ತಿದ್ದೇವೆ ಎನ್ನುವುದು ರಹಸ್ಯವಾಗಿದೆ. ಮುಂದಿನ ಕ್ಷಣ ಏನು ಸಂಭವಿಸಬಹುದು ಎಂಬುದನ್ನೂ ತಿಳಿಯಲಾರೆವು. ಜೊತೆಗಿರುವವರಲ್ಲಿ ಯಾರು, ಯಾವಾಗ ದೂರವಾಗುತ್ತಾರೆ, ಯಾರು ನೆರವಿಗೆ ನಿಲ್ಲುತ್ತಾರೆ ಎನ್ನುವುದೂ ಸ್ಪಷ್ಟವಿಲ್ಲ. ಗೊತ್ತುಗುರಿಯಿರದ ಪಯಣದಲ್ಲಿ ನಾಲ್ದೆಸೆಗಳನ್ನು ನೋಡುತ್ತ ಆಕಸ್ಮಿಕಗಳನ್ನು ಅನಿವಾರ್ಯವಾಗಿ ಎದುರಿಸುತ್ತ ನಡೆಯುವ ದಾರಿಹೋಕರು ನಾವು.

ನಮ್ಮ ಅನುಭವಕ್ಕೆ ನಿಲುಕುವ ಹುಟ್ಟು-ಸಾವುಗಳ ನಡುವಿನ ಜೀವಿತವನ್ನೇ ಅರ್ಥಮಾಡಿಕೊಳ್ಳುವುದರಲ್ಲಿ ಸೋತಿರುವ ನಾವು ತೆರೆಯಾಚೆಗಿರುವ ಜನನ-ಮರಣಗಳನ್ನು ತಿಳಿಯಬಲ್ಲೆವೇ? ನಾವಿರುವ ಪರಿಸರ, ಬೆಳೆವ ಮನೆ, ಆಸರೆಯಾದ ಕುಟುಂಬ, ಜೊತೆಗೂಡುವ ಬಾಂಧವ್ಯಗಳು ಇವೆಲ್ಲ ನಮಗೆ ಲಭ್ಯವಾದದ್ದು ಹೇಗೆ? ಯಾರೋ ಕರೆದಂತೆ ಅವಸರದಲ್ಲಿ ಎದ್ದು ನಡೆಯುವ ಜೀವಗಳು ಸಾವಿನ ಹೊಸಿಲಿನಾಚೆ ಹೋಗುವುದಾದರೂ ಎಲ್ಲಿಗೆ? ಮತ್ತೆ ಮರಳಿ ಇನ್ನೊಂದು ಜನ್ಮವೆತ್ತಿ ಬರುತ್ತಾರೆಯೇ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ. ಆದರೆ ಯಾವುದಕ್ಕೂ ಸಮರ್ಪಕ ಉತ್ತರವಿಲ್ಲ. ಎಲ್ಲದಕ್ಕೂ ಮಬ್ಬು ಕತ್ತಲೆಯೊಂದು ಮುಸುಕಿದೆ. ಜೀವನದಲ್ಲಿ ಅವೆಷ್ಟೋ ಆಸೆ-ಆಕಾಂಕ್ಷೆಗಳು ಮತ್ತೆಮತ್ತೆ ಮೂಡುತ್ತವೆ. ಅವುಗಳನ್ನು ಬೆನ್ನಟ್ಟಿ ನಡೆವ ರಭಸದಲ್ಲಿ ಬಾಳಹಾದಿ ಮುಗಿದೇಹೋಗುತ್ತದೆ. ಯಾವುದು ಮನಸ್ಸನ್ನು ಆಕರ್ಷಿಸುತ್ತದೆ, ಮೋಹಪರವಶವಾಗಿಸುತ್ತದೆ, ಭಾವತೀವ್ರತೆಯಲ್ಲಿ ಯಾಕೆ ಕಳೆದುಹೋಗುತ್ತೇವೆ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ವ್ಯಕ್ತಿ ಮನದ ಓಟವನ್ನು, ಆಸೆಯನ್ನು ಅರಿಯಲಾರ, ಹತ್ತಿಕ್ಕಲಾರ.

ಪ್ರಕೃತಿಯ ಬಹು ದೊಡ್ಡ ವಿಸ್ಮಯವಾದ ಸೂರ್ಯ-ಚಂದ್ರರು ಹುಟ್ಟುವ ತಾಣ ಎಲ್ಲೋ ಅಗೋಚರವಾಗಿದೆ. ಕತ್ತಲೆಯಲ್ಲಿ ಹೊಳೆವ ನಕ್ಷತ್ರಗಳು, ಬೆಳದಿಂಗಳು, ಬೆಳ್ಮುಗಿಲುಗಳು ಸುಂದರ ಮತ್ತು ನಿಗೂಢ. ಇವೆಲ್ಲ ಹೀಗೆ ಸಂಯೋಜಿತವಾಗಲು, ಕತ್ತಲಲ್ಲಿ ಬಚ್ಚಿಟ್ಟುಕೊಳ್ಳಲು ಕಾರಣವೇನು? ಯಾಕೆ ಯಾವುದೂ ಸ್ಪಷ್ಟವಾಗಿ ತನ್ನಿರವನ್ನು ಪ್ರಕಟಿಸುವುದಿಲ್ಲ? ವಿಚಕ್ಷಣ ಮತಿಯ ಮಾನವನು ಕುತೂಹಲಕಾರಿ ನಿಸರ್ಗದ ಚೆಲುವು-ಒಲವುಗಳನ್ನು ಕಾಣಬಲ್ಲ. ಹಲವು ಪ್ರಶ್ನೆ, ಅನ್ವೇಷಣೆಗಳ ಮೂಲಕ ಮಬ್ಬು ಕತ್ತಲನ್ನು ಹೋಗಲಾಡಿಸುವ ಬೆಳಕಿನಂತೆ ಬಾಳಬಲ್ಲ. ಉಳಿದ ಪ್ರಾಣಿಗಳಿಗಿಂತ ಅಪರೂಪನೆನಿಸಿ, ಮತಿಮನಗಳನ್ನು ಬಳಸಿಕೊಂಡು ವಿಶ್ಲೇಷಣಾತ್ಮಕವಾಗಿ ಸ್ಪಂದಿಸುವ ಸ್ವಭಾವವು ಮನುಷ್ಯನಲ್ಲಿ ಸಹಜವಾಗಿದೆ. ಹಾಗಾಗಿ ಇರುಳಿನಾಚೆಯ ನಿಗೂಢ, ಅಸ್ಪಷ್ಟ ಸತ್ಯಗಳನ್ನು ತನ್ನ ವಿವೇಕವೆಂಬ ಪ್ರಕಾಶದಿಂದ ಪ್ರಕಟಗೊಳ್ಳುವಂತೆ ಮಾಡಲು ಸದಾ ಯತ್ನಿಸುತ್ತಲೇ ಇರುತ್ತಾನೆ. ಜ್ಞಾನವೆಂಬ ದೀಪವನ್ನು ಬೆಳಗಿ ನಡೆವ ದಾರಿಯ ಕತ್ತಲನ್ನು ತೊಳೆಯುವ ಸಾಮರ್ಥ್ಯ ಮನುಜನಿಗಿದೆ. ಹೀಗೆ ಸೃಷ್ಟಿರಹಸ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುವ, ವಿಶ್ಲೇಷಿಸುವ ಪ್ರಯತ್ನದಲ್ಲಿ ವ್ಯಕ್ತಿಯೇ ಬೆಳಕಂತೆ ಲೋಕದ ತಮವನ್ನು ಇಲ್ಲವಾಗಿಸುತ್ತಾನೆ.

ಈ ಎತ್ತರಕ್ಕೇರಲು ಆತ್ಮಬಲ ವೃದ್ಧಿಯಾಗಬೇಕು. ರಹಸ್ಯವಾಗಿರುವ ನಿಸರ್ಗದ ತೋರಿಕೆಗಳಲ್ಲಿ, ಅದ್ಭುತ ಸೌಂದರ್ಯಗಳಲ್ಲಿ, ಲೋಕವ್ಯವಹಾರಗಳಲ್ಲಿ ಪರಬ್ರಹ್ಮಸ್ವರೂಪವೇ ಅವ್ಯಕ್ತವಾಗಿ ಮಿಳಿತವಾಗಿರುವುದನ್ನು ಗ್ರಹಿಸುವ ವಿವೇಕಿಯಾಗಬೇಕು. ಸುಂದರವಾಗಿ ಅರಳುತ್ತಿರುವ ಜಗತ್ತನ್ನು ಮತಿಯ ಬೆಳಕಿನಲ್ಲಿ ಕಾಣುತ್ತ ಹೋದಂತೆ ಅರಿವಿನ ಬೆಳಕು ಬೆಳಗುತ್ತದೆ, ಅಜ್ಞಾನ ಕಳೆಯುತ್ತದೆ.