ನ್ಯೂಸ್

ಕಗ್ಗದ ಬೆಳಕು: ಗುಣಶಾಲಿಯ ಆತ್ಮವಿಮರ್ಶೆ

ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ |

ಕಪ್ಪು ಕಂಡು ಕನಲ್ವ ಕೆಂಡ ಗುಲಗಂಜಿ ||

ಉಪ್ಪೊ ಸಪ್ಪೆಯೊ ನಿನ್ನ ಮೈಬೆವರು ನೆಕ್ಕಿ ತಿಳಿ |

ಒಪ್ಪಿಹೆಯಾ ನೀನಜನ - ಮಂಕುತಿಮ್ಮ ||

‘ತಪ್ಪನ್ನು ಒಂದಿಷ್ಟೂ ಒಪ್ಪಿಕೊಳ್ಳದ ಅಪ್ಪಟ ಗುಣಶಾಲಿಯು ತನ್ನ ಮೈಮೇಲೆ ಕಪ್ಪು ಚುಕ್ಕೆ ಹೊಂದಿದ ಕೆಂಡದಂಥ ಗುಲಗುಂಜಿಯಂತೆ. ಕೆಂಪಿನ ಮೇಲಿನ ಕಪ್ಪು ಚುಕ್ಕೆ ಎದ್ದು ಕಾಣುತ್ತದೆ. ಹೀಗೆ ತನ್ನ ಸಣ್ಣ ತಪ್ಪು ಗುರುತಿಸಲ್ಪಟ್ಟಾಗ ಸಹಿಸಿಕೊಳ್ಳದೆ ಸಿಡಿದೇಳುತ್ತಾನೆ. ನಿನ್ನ ಮೈಬೆವರು ಉಪ್ಪುಪ್ಪಾಗಿದೆಯೋ, ಸಪ್ಪೆಯಿದೆಯೋ ಎನ್ನುವುದನ್ನು ಸ್ವತಃ ನೀನೇ ನೆಕ್ಕಿ ತಿಳಿ. ನೀನು ಸೃಷ್ಟಿಯ ನಿರ್ವತೃವಾದ ಬ್ರಹ್ಮನನ್ನು ಒಪ್ಪಿಕೊಂಡಿದ್ದೀಯೇ?’ ಎಂದು ಪ್ರಶ್ನಿಸುತ್ತಾರೆ ಡಿ.ವಿ.ಜಿ.

ಪ್ರತಿ ವ್ಯಕ್ತಿಯೂ ತನ್ನನ್ನು ತಾನು ಅತ್ಯುತ್ತಮನೆಂದೇ ಭಾವಿಸಿರುತ್ತಾನೆ. ಇತರರ ಮನದಲ್ಲೂ ತಾನು ಉತ್ತಮನೆಂದು ಬಿಂಬಿಸಲು ಒಳ್ಳೆಯತನವನ್ನು ನಟಿಸುತ್ತಾನೆ. ಮನದೊಳಗೆ ಹಾಲಾಹಲವಿದ್ದರೂ, ಹಾಲಿನಂಥ ನಗು ಬೀರುವ ನಯವಂಚಕರ ದೋಷಗಳು ಅವರ ಆತ್ಮೀಯರಿಗಷ್ಟೇ ತಿಳಿಯುತ್ತದೆ. ಹೀಗೆ ತಾನು ಸರ್ವಗುಣ ಸಂಪನ್ನ, ಯಾವ ತಪ್ಪನ್ನೂ ಮಾಡಿದವನಲ್ಲ ಎಂಬಂತೆ ನಡೆದುಕೊಳ್ಳುವ ವ್ಯಕ್ತಿಯು ಇತರರಲ್ಲಿ ತಪ್ಪುಗಳನ್ನೇ ಕಾಣುತ್ತಾನೆ. ಕೆಲವೊಮ್ಮೆ ಇಲ್ಲದ ದೋಷಗಳನ್ನು ಹುಡುಕಿ, ಹಂಗಿಸಿ, ಬುದ್ಧಿ ಹೇಳುವುದುಂಟು. ಇತರರನ್ನು ತಿದ್ದಲು ಆತುರರಾಗಿರುವರೇ ಹೊರತು ತಮ್ಮೊಳಗನ್ನು ಕಾಣುವ ಯತ್ನವನ್ನು ಮಾಡಲಾರರು. ಹೀಗೆ ಇತರರ ದೋಷಗಳನ್ನು ಮಾತ್ರ ಕಾಣುವಾತನಿಗೆ ತನ್ನ ಬಗೆಗೆ ಬಹಳ ನಂಬಿಕೆ ಇರುತ್ತದೆ. ಜತೆಗೆ ತನ್ನ ತಪ್ಪುಗಳೆಲ್ಲದಕ್ಕೂ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುವ ಜಾಣತನವೂ ಇರುತ್ತದೆ. ತಾನು ಸತ್ಯವಂತ, ಕೆಡುಕಿನ ವಿರುದ್ಧ ತಿರುಗಿ ನಿಲ್ಲಬಲ್ಲಾತ ಎಂಬ ಕಲ್ಪನೆಯೊಂದನ್ನು ತನ್ನ ಬಗ್ಗೆ ತಾನೇ ಹೆಣೆದುಕೊಂಡಿರುತ್ತಾನೆ. ಗುಲಗಂಜಿಯಲ್ಲಿರುವ ಕಪ್ಪು ಚುಕ್ಕೆಯಂತೆ, ತನ್ನಲ್ಲೂ ದೋಷವಿದೆ ಎನ್ನುವುದು ನಿರೂಪಿತವಾದರೆ, ಅದನ್ನು ಒಪ್ಪದೆ ಕೋಪಿಸಿಕೊಳ್ಳುತ್ತಾನೆ. ದುರಾಗ್ರಹದಿಂದ ಯಾರ ಮಾತನ್ನೂ ಗೌರವಿಸದೆ, ತಾನಿರುವ ರೀತಿಯೇ ಸರಿ ಎಂದು ಸಾಧಿಸುತ್ತಾನೆ. ದೌರ್ಬಲ್ಯವನ್ನು ಒಪ್ಪಿಕೊಂಡರೆ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ಎಂದು ಭಾವಿಸಿ, ತಪ್ಪನ್ನು ಒಪ್ಪಿಕೊಳ್ಳದೆ ಮಲೆತುನಿಲ್ಲುತ್ತಾನೆ.

ಬದುಕಿನಲ್ಲಿ ಯಾವುದಾದರೂ ಅತೃಪ್ತಿ ಕಾಡುತ್ತಿದ್ದರೆ, ವ್ಯಕ್ತಿಯು ಇತರರಲ್ಲಿ ದೋಷವನ್ನು ಅರಸತೊಡಗುತ್ತಾನೆ. ಅಥವಾ ಆತನಲ್ಲಿಯೇ ಯಾರಿಗೂ ಅರಿಯದ ದೋಷವೊಂದಿದ್ದರೆ, ಆಗಲೂ ವ್ಯಕ್ತಿಯು ಇತರರಲ್ಲಿ ದೋಷಗಳನ್ನು ಹುಡುಕತೊಡಗುತ್ತಾನೆ. ಹೀಗೆ ಮಾಡುವುದರಿಂದಾಗಿ ಸ್ನೇಹ-ಸಂಬಂಧಗಳು ಕಡಿದುಹೋಗುವುದರೊಂದಿಗೆ, ಮನಸ್ಸೂ ಅಶಾಂತಿಯಿಂದ ತೊಳಲಾಡುತ್ತದೆ. ಜೀವನೋತ್ಸಾಹವು ಕಳೆಗುಂದಿ ಬದುಕು ಬೇಸರದಲ್ಲೇ ಕಳೆದುಹೋಗುತ್ತದೆ. ಇತರರ ತಪ್ಪುಗಳಿಗೆ ಕಾರಣ ಹುಡುಕುವುದು ಸಜ್ಜನಿಕೆಯಲ್ಲ. ಕ್ಷಮಿಸಿ ನಡೆವ ಗುಣವು ವ್ಯಕ್ತಿತ್ವದ ಭಾಗವಾಗಬೇಕು. ಯಾಕೆಂದರೆ ತಪ್ಪನ್ನೇ ಮಾಡದವರು ಭೂಮಿಯಲ್ಲಿರಲು ಸಾಧ್ಯವಿಲ್ಲ. ಮನುಷ್ಯನ ಸಹಜಸ್ವಭಾವದಿಂದಲೇ ಪ್ರಮಾದಗಳು ಸಂಭವಿಸುತ್ತವೆ. ಇದಕ್ಕೆ ಪೂರ್ವಾರ್ಜಿತ ಅಥವಾ ಈ ಜನ್ಮದಲ್ಲೇ ಬೆಳೆದದ್ದು ಕಾರಣವಾಗಿರುತ್ತದೆ.

ತಪ್ಪುಗಳೂ ಬದುಕಿಗೆ ಪಾಠವಾಗುತ್ತವೆ. ಎಲ್ಲರ ಶ್ರಮದ ಬೆವರಿಗೂ ಸಮಾನ ಮೌಲ್ಯ, ರುಚಿ, ಅವಕಾಶ. ಉಪ್ಪು, ಸಪ್ಪೆ, ಸಿಹಿ, ಖಾರಗಳೆಂಬ ವೈವಿಧ್ಯ ಇರಲು ಸಾಧ್ಯವೇ ಇಲ್ಲ. ವ್ಯಕ್ತಿಯು ಆತ್ಮವಿಮರ್ಶೆ ಮಾಡಿಕೊಳ್ಳುತ್ತ ಹೋದಂತೆ ತನ್ನ ದೋಷಗಳನ್ನು ಮನಗಾಣುತ್ತಾನೆ. ಯಾರು ಜಗತ್ತನ್ನು, ಜಗವ ನಿರ್ವಿುಸಿದ ಭಗವಂತನನ್ನು ಒಪ್ಪುತ್ತಾನೋ ಆತನು ಎಲ್ಲರನ್ನೂ ತನ್ನಂತೆಯೇ, ಎಲ್ಲರೂ ತನ್ನವರೇ ಎಂದು ಭಾವಿಸುತ್ತಾನೆ. ಪ್ರೇಮದಿಂದ ಒಡನಾಡುತ್ತಾನೆ. ಪ್ರಪಂಚದೆಲ್ಲೆಡೆಯೂ ಭಗವಂತನೇ ಸೇರಿಕೊಂಡಿದ್ದಾನೆ ಎಂಬ ಪ್ರಜ್ಞೆ ಎಚ್ಚರವಾದರೆ ವ್ಯಕ್ತಿ ಸಂಯಮಿಯಾಗುತ್ತಾನೆ, ಹಮ್ಮು ತೊರೆದು ಸರಳವಾಗಿ ಬಾಳುತ್ತಾನೆ.