ನ್ಯೂಸ್

ಕಗ್ಗದ ಬೆಳಕು; ಬೆರಗು ಮತ್ತು ಮೌನ

malli

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು |

ಕೆಳೆಯೊಲವು ನಲ್ಲೆಯ ವಿಯೋಗವಿಂತಹುದು ||

ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ |

ನೊಳದನಿಯದೊಂದರಿಂ - ಮಂಕುತಿಮ್ಮ ||

‘ಪರ್ವತ ಮತ್ತು ಅದರ ಆಳ ಕಣಿವೆಗಳ ಬೆರಗಿನ ಎದುರು ನಿಂತಾಗ, ಪ್ರಕೃತಿಯು ಕೋಪಿಸಿಕೊಂಡಂತೆ ಕಾಣುವ ಗುಡುಗು-ಮಿಂಚುಗಳನ್ನು ನೋಡಿದಾಗ, ಸ್ನೇಹ, ಒಲವು, ವಿರಹ ಮುಂತಾದ ಭಾವಗಳಲ್ಲಿಯೂ ಮನಸ್ಸಿನ ಓಟವು ನಿಂತಂತಾಗುವುದು. ಅದು ಆಂತರ್ಯದ ಧ್ವನಿಯನ್ನು ಮೂಕಗೊಳಿಸುತ್ತದೆ’ ಎನ್ನುತ್ತದೆ ಈ ಕಗ್ಗ.

ನಿಸರ್ಗಸೌಂದರ್ಯ, ಸ್ನೇಹ-ಬಾಂಧವ್ಯ, ಭಾವತಲ್ಲಣಗಳ ಬಗ್ಗೆ ಅವೆಷ್ಟೋ ವ್ಯಾಖ್ಯಾನಗಳನ್ನು ಮಾಡಬಹುದು. ಸಾಹಿತ್ಯ-ಸಂಗೀತ, ಕಲೆಗಳಲ್ಲೂ ಅವುಗಳನ್ನು ಅಭಿವ್ಯಕ್ತಗೊಳಿಸಬಹುದು. ಆದರೆ ಪ್ರಕೃತಿಯ ವಿಸ್ಮಯ, ಒಲುಮೆ, ವಿಯೋಗ, ವಿರಹಗಳಂಥ ಭಾವಸ್ಪಂದನಗಳಿಗೆ ನೇರವಾಗಿ ಮುಖಾಮುಖಿಯಾದಾಗ ಮನಸ್ಸು ಮೌನಕ್ಕೆ ಶರಣಾಗುತ್ತದೆ.

ಆಗಸದಿಂದ ಧುಮ್ಮಿಕ್ಕುವಂತೆ ಭಾಸವಾಗುವ ಜಲಪಾತ, ಅದು ಪಸರಿಸುವ ತುಂತುರು ಆವಿ, ಜಲಧಾರೆಯ ನಾದದೊಳಗೆ ತನ್ನ ನಾದವನ್ನೂ ಸೇರಿಸಿ ಮೌನವಾಗುವ ಪರಿಸರ ಇವೆಲ್ಲ ನೋಡುಗನ ಹೃದಯದಲ್ಲಿ ಸಂಚಲನ ಉಂಟುಮಾಡುತ್ತವೆ. ಒಂದಷ್ಟು ಹೊತ್ತು ಆ ಮೌನವೇ ಆಪ್ಯಾಯಮಾನವೆನಿಸುತ್ತದೆ.

ಸಮುದ್ರದ ಬಗ್ಗೆ ತಿಳಿದಿದ್ದರೂ, ಭೋರ್ಗರೆಯುವ ಸಾಗರದ ಎದುರು, ಲಂಘಿಸುವ ಅಲೆಗಳನ್ನು ನೋಡುತ್ತ ಮೈಮರೆತ ಮನಸ್ಸು ಅಲೆದಾಟವನ್ನು ನಿಲ್ಲಿಸಿ ಅವರ್ಣನೀಯ ಆನಂದದಲ್ಲಿ ಲೀನವಾಗುತ್ತದೆ. ಸೃಷ್ಟಿಯ ಸುಂದರ ಆಭರಣಗಳಂತಿರುವ ಕಾನು ಮಲೆಕಣಿವೆಗಳು, ವಿಸ್ತಾರವಾದ ಬಯಲು, ತೊರೆ, ನಿಝುರಗಳು ನಿಸರ್ಗಾರಾಧಕರನ್ನು ಮಂತ್ರಮುಗ್ಧಗೊಳಿಸುತ್ತವೆ.

ಮನದೊಳಗೆ ಲಲಿತ ಭಾವಗಳನ್ನು ಹುಟ್ಟಿಸುವ ನಿಸರ್ಗದ ಚೆಲುವಿನಂತೆಯೇ ಕೆಲವು ಪ್ರಾಕೃತಿಕ ವಿಶೇಷಗಳು ಭಯ, ಆತಂಕವನ್ನೂ ಮೂಡಿಸುವುದಿದೆ. ಇದ್ದಕ್ಕಿದ್ದಂತೆ ದಟ್ಟೆ ೖಸುವ ಕಾಮೋಡ, ಹೊಳೆವ ಮಿಂಚು, ನಡುಗಿಸುವ ಗುಡುಗು, ನೆಲಮುಗಿಲನು ಒಂದಾಗಿಸುವಂತೆ ಬೀಸುವ ಗಾಳಿ, ನಡುಗುವ ಭೂಮಿ, ಉಕ್ಕಿ ಹರಿವ ನದಿ-ನದಗಳು ಭಯವನ್ನು ಹುಟ್ಟಿಸುವುದರೊಂದಿಗೆ, ಪ್ರಕೃತಿಯ ಅಪಾರ ಶಕ್ತಿಯನ್ನು ಪರಿಚಯಿಸುತ್ತವೆ.

ಇದೇ ರೀತಿ ಭಾವತೀವ್ರತೆಯಲ್ಲಿ ತನ್ಮಯರಾಗಿಸುವ ಭಾವನಾಪ್ರಪಂಚವೊಂದು ನಮ್ಮೊಳಗೇ ಇದೆ. ಕಾರಣವರಿಯದೆಯೇ ಜೊತೆಗೂಡುವ ಸ್ನೇಹ-ಸಂಬಂಧಗಳು ಉಳಿಯಲು, ಬೆಳೆಯಲು ನಿರ್ವಾಜ್ಯ ಪ್ರೀತಿಯ ಒಸಗೆ ಬೇಕು. ಸ್ವಾರ್ಥಾಪೇಕ್ಷೆಯೇ ಇಲ್ಲದೆ ಒಡನಾಡುವ ಬಾಂಧವ್ಯಗಳು, ಅವು ತೋರುವ ಪ್ರೀತಿ-ಕಾಳಜಿ, ನೆರವು-ತ್ಯಾಗ ಮನಸ್ಸನ್ನು ಆರ್ದ್ರವಾಗಿಸುತ್ತವೆ.

ಭಾವದೊಲುಮೆಯೊಳಗೆ ಹೃದಯಕ್ಕಿಳಿದ, ಜೀವಕ್ಕೆ ಜೀವವೇ ಆಗಿದ್ದ ಪ್ರೀತಿಪಾತ್ರರು ದೂರವಾದರೆ ಆ ವಿಯೋಗ, ವಿರಹಭಾವವು ಮನಸ್ಸನ್ನು ಸ್ತಬ್ಧವಾಗಿಸುವುದಿದೆ. ಜೊತೆಗಿದ್ದಾಗ ಅರಿವಾಗದ ಆತ್ಮೀಯತೆ, ಒಲುಮೆಗಳು ದೂರವಾದಾಗ ಕಾಡುತ್ತವೆ. ಜೀವವು ಮೌನದೊಳಗೆ ತನ್ನನ್ನು ಸಂತೈಸಿಕೊಳ್ಳಲು ಯತ್ನಿಸುತ್ತದೆ.

ಈ ರೀತಿ ನಿತ್ಯ ಜೀವಿತದಲ್ಲಿ ವಿಸ್ಮಯ, ಪ್ರೇಮ, ವಿರಹಗಳು ಮೂಕಭಾವಕ್ಕೆ ಒಯ್ದುಬಿಡುತ್ತವೆ. ಮನವು ಆ ಕ್ಷಣ ಇನ್ನೇನೂ ಮಾಡದೆ ತಟಸ್ಥವಾಗುತ್ತದೆ. ಬಾಹ್ಯವಾಗಿ ಪ್ರತಿಕ್ರಿಯಿಸುವ ಉದ್ಗಾರ, ವರ್ಣನೆಗಳೆಲ್ಲ ಪೊಳ್ಳೆನ್ನಿಸುವಂತೆ ಆ ದಿವ್ಯಾನುಭವ ಸ್ಪಂದಿಸುತ್ತದೆ.

ಪ್ರತಿ ಕ್ಷಣವೂ ಮಾರ್ದನಿಸುವ ಹೃದಯದ ದನಿಯು ಸುಮ್ಮನಾಗಿ, ಆತ್ಮಾವಲೋಕವು ಆರಂಭವಾಗಲು ಇಂತಹ ಅನುಭೂತಿಗಳು ಬೇಕು. ಬದುಕಿನ ದಾರಿಯಲ್ಲಿ ಮತ್ತೆಮತ್ತೆ ಇಂತಹ ದಿವ್ಯಾನುಭವವು ಹೃದಯವನ್ನು ಸೋಕಿದರೆ, ಮನಸ್ಸು ಶಾಂತವಾಗುವುದರೊಂದಿಗೆ, ಸಚ್ಚಿಂತನೆಯ ಹಾದಿ ತೆರೆಯುತ್ತದೆ.