ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು? |
ಆಟದೋಟವೆ ಲಾಭ - ಮಂಕುತಿಮ್ಮ ||
‘ಆಟಕ್ಕೆ ಸಿಗುವ ಫಲವೇನು? ಕುತೂಹಲದಿಂದ ಆಟವಾಡಿದಾಗ ಸಿಗುವ ಸಂತೋಷವೇ ಅದರ ಫಲ. ಚೀಟಿಯು ತಾನು ಬೀಳುವುದಿಲ್ಲ ಎಂದರೆ ಆಟವು ಸಾಗುವುದಕ್ಕುಂಟೆ? ಆಟದಲ್ಲಿ ಏಟಾಯಿತೆ? ಗೆಲುವಾಯಿತೆ? ಎಂದು ಕೇಳುವುದೇನು? ಆಟದ ಓಟವೇ ಲಾಭ’ ಎನ್ನುತ್ತದೆ ಈ ಕಗ್ಗ.
ಪುಟ್ಟ ಮಗು ಮಲಗಿರುವಲ್ಲೇ ಕೈಕಾಲು ಆಡಿಸುತ್ತ ನಗುತ್ತದೆ, ಹಷೋದ್ಗಾರಗಳನ್ನು ಮಾಡುತ್ತ ತನ್ನ ಪಾಡಿಗೆ ತಾನು ಆಟವಾಡುತ್ತಿರುತ್ತದೆ. ಹೀಗೆ ಆಡುವುದರಿಂದ ಮಗುವಿಗೇನು ಸಿಗುತ್ತದೆ? ವ್ಯರ್ಥ ಶ್ರಮವಲ್ಲವೇ ಎಂದು ಯೋಚಿಸಬೇಕಿಲ್ಲ. ಆಟವಾಡುವಷ್ಟು ಹೊತ್ತು ಮಗು ಆನಂದವಾಗಿರುತ್ತದೆ. ಈ ಹಷೋಲ್ಲಾಸವೇ ಮಗುವಿನ ಆಟಕ್ಕಿರುವ ಫಲ.
ಕೆಲವರು ಮನೋರಂಜನೆಗಾಗಿ ಇಸ್ಪೀಟಿನಾಟವನ್ನು ಆಡುತ್ತಾರೆ. ಅವರ ಕೈಗಳಲ್ಲಿ ಬಣ್ಣದೆಲೆಗಳು ಮತ್ತೆಮತ್ತೆ ಓಡಾಡುತ್ತವೆ. ಈ ಆಟದಲ್ಲಿ ಚೀಟಿಯು ತಾನು ಆಟದಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎಂದರಾಗುವದೇ? ಅದು ಅಖಾಡಕ್ಕೆ ಇಳಿಯದೆ ಇದ್ದರೆ ಆಟ ಮುಂದುವರಿಯಲು ಸಾಧ್ಯವಿಲ್ಲ.
ಪೂರ್ತಿ ಆಟವನ್ನು ತಾನೇ ಸಂಯೋಜಿಸುವ ಸಾಮರ್ಥ್ಯ, ಅರ್ಹತೆಗಳು ಪುಟ್ಟ ಚೀಟಿ ಎಲೆಗೆ ಇಲ್ಲ. ಅದೇನಿದ್ದರೂ ಇಸ್ಪೀಟಿನೆಲೆಗಳನ್ನು ಕಲಸಿದ, ಹಂಚಿದ, ಹಿಡಿದುಕೊಂಡ ಕೈಗಳ ಸೊತ್ತು. ಅವುಗಳ ನಿರ್ಧಾರಕ್ಕೆ ತಕ್ಕಂತೆಯೇ ನೆಲಕ್ಕೆ ಬೀಳುತ್ತದೆ, ಮತ್ತೊಮ್ಮೆ ಮೇಲಕ್ಕೆತ್ತಲ್ಪಡುತ್ತದೆ. ಬಣ್ಣ ಮಾಸಿದರೆ ತಿಪ್ಪೆಗೆಸೆಯಲ್ಪಡುತ್ತದೆ.
ಮನುಷ್ಯ ಜೀವನವೂ ಒಂದು ಬಗೆಯ ಆಟ. ಸುಖ-ದುಃಖಗಳಿಂದ ಕೂಡಿದ ಬಾಳಿನಾಟದಲ್ಲಿ ಆಡಲೇಬೇಕಾದ ಅನಿವಾರ್ಯತೆ ಎಲ್ಲರದು. ಅಷ್ಟೇ ಅಲ್ಲ, ಆಟಗಾರನ ನಿಯಂತ್ರಣಕ್ಕೆ ಸಿಗದೆಯೇ ಆಟವು ನಡೆಯುತ್ತಿರುತ್ತದೆ. ಯಾಕೆಂದರೆ ದೇವರು, ಪೂರ್ವಕರ್ಮವಾಸನೆ ಮತ್ತು ಪುರುಷಪ್ರಯತ್ನಗಳು ಜೊತೆಯಾಗಿ ಸೇರಿ ಮನುಷ್ಯರನ್ನು ಇಸ್ಪೀಟಿನೆಲೆಯಂತೆ ಬಳಸಿಕೊಂಡು ಆಟವಾಡುತ್ತಿವೆ.
ಹಾಗಾಗಿಯೇ ಬದುಕಿನಾಟವನ್ನು ಊಹಿಸಲಾಗಲಿ, ಸಂಯೋಜಿಸಲಾಗಲಿ ಸಾಧ್ಯವಿಲ್ಲ. ಈ ಅನಿಶ್ಚಿತ, ಅನಿಯಂತ್ರಿತ ಆಟದಿಂದ ಏನು ಫಲ? ಕೆಲವೊಮ್ಮೆ ಜನ್ಮವೇ ವ್ಯರ್ಥವೆನಿಸಬಹುದು. ಆದರೂ ರಹಸ್ಯವನ್ನು ಒಂದಿನಿತೂ ಬಿಡದೆ, ಪ್ರತಿ ಕ್ಷಣವೂ ಸವಾಲಿನಂತೆ ಎದುರಾಗುವ ಬದುಕಿನಾಟವನ್ನು ವಶಪಡಿಸಿಕೊಳ್ಳುವುದರಲ್ಲಿ ಸಾರ್ಥಕಭಾವ ಹೃದಯಕ್ಕಿಳಿಯುತ್ತದೆ.
ಈ ಆಟದ ಹೋರಾಟದಲ್ಲಿ ಗೆಲ್ಲಲು ಮಾಡುವ ಪ್ರಾಮಾಣಿಕ ಪ್ರಯತ್ನ ಮತ್ತು ಅದರಿಂದ ಬೆಳೆವ ತಿಳಿವುಗಳೇ ಬಾಳಿನಾಟಕ್ಕೆ ಸಿಗುವ ಸತ್ಪಲ. ಈ ಪ್ರಯತ್ನದಲ್ಲಿ ಮನುಷ್ಯನು ಪರಿಪಕ್ವಗೊಳ್ಳುತ್ತಾನೆ. ಅವೆಷ್ಟು ನೋವುಗಳು ಕಾಡುತ್ತಿದ್ದರೂ ಬದುಕುವ ಪ್ರಯತ್ನವನ್ನು ಕೈಬಿಡಲಾರ.
ಇಂದಲ್ಲ ನಾಳೆ ಬದುಕು ಹಸನಾದೀತು, ಇಷ್ಟಾರ್ಥಗಳು ಸಿದ್ಧಿಸಬಹುದು ಎಂಬ ಭರವಸೆಯಿಂದಲೇ ಆಟಕ್ಕಿಳಿಯುತ್ತಾನೆ. ಹಲವು ನಿರೀಕ್ಷೆಗಳು, ಗೆಲ್ಲಲೇಬೇಕೆಂಬ ಛಲ, ಸೋತರೂ ಹಿಮ್ಮೆಟ್ಟದೆ ಮಾಡುವ ಸತತ ಪ್ರಯತ್ನ, ಸಹ ಆಟಗಾರರ ಜತೆಗಿನ ಬಾಂಧವ್ಯ, ಮೋಹದೆಳೆಗಳು ಆಟದ ಕೌತುಕ, ಸ್ವಾರಸ್ಯವನ್ನು ಕಾಪಾಡುತ್ತದೆ, ಹೆಚ್ಚಿಸುತ್ತದೆ.
ಆಟವಾಡುವಾಗ ಬೀಳುವುದು, ನೋಯುವುದು, ಸೋಲುವುದು ಸಾಮಾನ್ಯ. ಬಿದ್ದಾಗ ಏಟಾಯಿತೇ, ನೋವಾಯಿತೆ ಎಂದು ಗಾಬರಿಪಡುವ ಅಗತ್ಯವಿಲ್ಲ. ಆಟವೆಂದ ಮೇಲೆ ಸೋಲು-ಗೆಲುವು, ನೋವು-ನಲಿವು ಇದ್ದೇ ಇರುತ್ತದೆ. ಗೆಲ್ಲುತ್ತೇನೆ, ಗೆಲ್ಲಲೇಬೇಕು ಎಂಬ ಉತ್ಸಾಹದಲ್ಲಿ ನಿರಂತರವಾಗಿ ಆಡುವುದರಿಂದ ಅನುಭವ ವಿಸ್ತಾರವಾಗುತ್ತದೆ. ಅನುಭವದ ಅರಿವು ಬದುಕಿಗೆ ಬೆಳಕನ್ನೀಯುತ್ತದೆ. ಅನ್ಯ ಉದ್ದೇಶವಿರದ, ಅನ್ಯ ಸಹಾಯವನ್ನೂ ಬೇಡದ, ಆತ್ಮತೃಪ್ತಿಗಾಗಿಯೇ ಆಡುವ ಆಟದಿಂದ ಗೆಲುವು ಒಲಿಯುತ್ತದೆ, ಬದುಕು ನಲಿಯುತ್ತದೆ.