ಭದ್ರಾ ಕುಡಿಯುವ ನೀರನ್ನು ಅಕ್ರಮವಾಗಿ ತೋಟಗಳಿಗೆ ಮತ್ತು ಟ್ಯಾಂಕರ್‌ಗಳಿಗೆ ತುಂಬಿಸಲು ಸಿದ್ಧಪಡಿಸಿರುವುದು. 
ನ್ಯೂಸ್

ಅಡಕೆ ತೋಟಗಳಿಗೆ ಅಕ್ರಮವಾಗಿ ಭದ್ರಾ ನೀರು

ಜಿ. ಗಜೇಂದ್ರ

ಬೀರೂರು: ಕಡೂರು-ಬೀರೂರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಭದ್ರಾ ಕುಡಿಯುವ ನೀರು ಯೋಜನೆಯಿಂದ ಅಡಕೆ ತೋಟಗಳಿಗೆ ಅನಧಿಕೃತವಾಗಿ ನೀರು ಪೂರೈಕೆ ಮಾಡಿಕೊಂಡು ಅವಳಿ ಪಟ್ಟಣಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಭದ್ರಾ ಕುಡಿಯುವ ನೀರು ಲಕ್ಕವಳ್ಳಿಯಿಂದ ತರೀಕೆರೆ ಮಾರ್ಗವಾಗಿ ಹೊಸೂರು, ಅಜ್ಜಂಪುರ ಕ್ರಾಸ್, ಬಾವಿಕೆರೆ, ಕೋರನಹಳ್ಳಿ, ಚಟ್ನಹಳ್ಳಿ, ಕೊರಟಿಗೆರೆ ಗ್ರಾಮಗಳ ಮೂಲಕ ಹಾದು ಅಲ್ಲಿಂದ ಬೀರೂರು ಪಂಪ್‌ಹೌಸ್‌ಗೆ ಪೈಪ್ ಮೂಲಕ ಹರಿದು ಬರುತ್ತಿದೆ. ಆದರೆ ನೀರು ಹರಿದು ಬರುತ್ತಿರುವ ಕೆಲ ಗ್ರಾಮಗಳ ತೋಟದ ಮಾಲೀಕರು ಹಾದು ಹೋಗಿರುವ ಪೈಪ್‌ಗೆ ವಾಲ್ವ್‌ನ್ನು ಅಳವಡಿಸಿದ್ದಾರೆ. ಆ ವಾಲ್ವ್‌ಗಳಿಂದ ಬರುವ ನೀರಿನ ಸೋರುವಿಕೆಯನ್ನು ಹೆಚ್ಚಾಗಿ ಬರುವಂತೆ ಮಾಡಿ ಅದಕ್ಕೆ ಪೈಪ್‌ಗಳನ್ನು ಅಳವಡಿಸಿಕೊಂಡು ಪಂಪ್‌ಸೆಟ್‌ಗಳು ಹಾಗೂ ಟ್ರಾೃಕ್ಟರ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಸಹಾಯದಿಂದ ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಕಡೂರು-ಬೀರೂರು ಅವಳಿ ಪಟ್ಟಣಗಳಿಗೆ ಬರಬೇಕಾಗಿದ್ದ ಕುಡಿಯುವ ನೀರು ಸಮರ್ಪಕವಾಗಿ ಬಾರದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ.
ಕಳೆದ 2-3 ದಿನದಿಂದ ನೀರು ಬೀರೂರು-ಕಡೂರಿನ ಪಂಪ್‌ಹೌಸ್‌ಗೆ ಸರಿಯಾಗಿ ಬಾರದಿದ್ದಾಗ ನೀರುಗಂಟಿಗಳು ಹಾಗೂ ಪುರಸಭೆ ನೌಕರರು ಎಲ್ಲಾದರೂ ಪೈಪ್ ಡ್ಯಾಮೇಜ್ ಆಗಿರಬಹುದು ಎಂದು ಪೈಪ್ ಹಾದು ಹೋಗಿರುವ ಹಾದಿಯಲ್ಲಿಯೇ ಸಾಗಿದರು. ಆ ವೇಳೆ ಹೊಸೂರು, ಅಜ್ಜಂಪುರ ಕ್ರಾಸ್, ಕೋರನಹಳ್ಳಿ, ಬಾವಿಕೆರೆ ಸೇರಿದಂತೆ ವಿವಿಧ ಗ್ರಾಮಗಳ ಅಡಕೆ ತೋಟಗಳ ಮೂಲಕ ಹಾದು ಬಂದಿರುವ ಪೈಪ್‌ಗಳಲ್ಲಿದ್ದ ನೀರಿನ ಸೋರುವಿಕೆಯನ್ನು ಹೆಚ್ಚು ಮಾಡಿಕೊಂಡಿರುವ ರೈತರು ಕೃಷಿ ಹೊಂಡದ ಮಾದರಿಯಲ್ಲಿ ನೀರು ಸಂಗ್ರಹ ಮಾಡಿಕೊಂಡು ಅಲ್ಲಿಂದ ಟ್ಯಾಂಕರ್ ಹಾಗೂ ತಮ್ಮ ತೋಟಗಳಿಗೆ ನೀರು ಹರಿಸುತ್ತಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಬೀರೂರು ಮತ್ತು ಕಡೂರು ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲ ರೈತರು ಈ ರೀತಿ ಕುಡಿಯುವ ನೀರನ್ನು ಕಳ್ಳತನದಿಂದ ತಮ್ಮ ಅಡಕೆ ತೋಟಗಳಿಗೆ ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಕಡೂರು, ಬೀರೂರು ಪುರಸಭೆಯಿಂದ ಪೊಲೀಸ್ ಇಲಾಖೆಗೆ ದೂರು ನೀಡಲು ಅಧಿಕಾರಿಗಳು ಮತ್ತು ಸದಸ್ಯರು ಮುಂದಾಗಿದ್ದಾರೆ.