ಕಡೂರು: ರಾಜ್ಯದ ಇತಿಹಾಸದಲ್ಲಿ ಕಡೂರಿಗೆ ಮಹತ್ವದ ಸ್ಥಾನವಿದ್ದರೂ ಅದು ಸ್ಥಳೀಯರಿಗೆ ತಿಳಿಯದಿರುವುದು ವಿಷಾದಕರ ಸಂಗತಿ ಎಂದು ಇತಿಹಾಸ ಸಂಶೋಧಕ ಹಿರೇನಲ್ಲೂರು ಪಾಂಡುರಂಗ ತಿಳಿಸಿದರು.
ಕಡೂರು ತಾಲೂಕು ದರ್ಶನ ಗೋಷ್ಠಿಯಲ್ಲಿ ಮಾತನಾಡಿ, ಕಡೂರು ಇತಿಹಾಸದಲ್ಲಿ ಕಡವೂರು ಆಗಿತ್ತು. ಕೆಳದಿ ನೃಪವಿಜಯದಲ್ಲಿ ಕಡವೂರ ಕೋಟೆಯಂ ಎಂದು ಉಲ್ಲೇಖವಾಗಿದೆ. ಅದಕ್ಕೂ ಹಿಂದೆ ಆಸಂದಿ ಗಂಗರ ಶಾಸನದಲ್ಲಿಯೂ ಕಡವೂರು ಎಂದು ಉಲ್ಲೇಖಿತಗೊಂಡಿದೆ. ಮೈಸೂರಿನಲ್ಲಿ ಒಡೆಯರಿದ್ದರೂ ಸರ್ವಾಧಿಕಾರಿಯಾಗಿದ್ದ ಹೈದರ್ ಆಲಿ ಯುದ್ಧವೊಂದರಲ್ಲಿ ಮರಾಠ ಪೇಶ್ವೆಗಳೊಂದಿಗೆ ಸಂಧಾನ ಮಾಡಿಕೊಂಡಾಗ ಕೊಡಬೇಕಾದ ಪೊಗದಿಗೆ ಅಡವಿಟ್ಟ ಸೀಮೆಗಳಲ್ಲಿ ಕಡೂರು ಸಹ ಒಂದು. ದೊರೆಯ ಋಣವನ್ನು ಕಡೂರು ತೀರಿಸಿದ ಐತಿಹಾಸಿಕ ಘಟನೆ ರೋಚಕವಾದುದು. ಹೊಯ್ಸಳರ ಅತಿ ಹೆಚ್ಚು ಶಾಸನಗಳು ದೊರೆತಿರುವುದು ಕಡೂರಿನಲ್ಲಿ. ಪ್ರಾಗೈತಿಹಾಸಿಕ ಕಾಲದಿಂದ ಚೋಳ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಅರಸರು, ಪಾಳೆಯಗಾರರು, ಮೈಸೂರು ಒಡೆಯರು ಎಲ್ಲರ ಆಳ್ವಿಕೆಯನ್ನು ಕಡೂರು ಕಂಡಿದೆ. ಈ ಎಲ್ಲ ಕಾಲಘಟ್ಟದ ಸಂಗತಿಗಳ ಶಾಸನಾಧಾರವನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಕಡೂರಿನ ಐತಿಹಾಸಿಕ ಮಹತ್ವವನ್ನು ಇಂದಿನವರಿಗೆ ತಿಳಿಸುವ ಕಾರ್ಯವಾಗಬೇಕು. ಆಗ ನಮ್ಮ ನೆಲದ ಹಿರಿಮೆ, ಪ್ರಾಮುಖ್ಯತೆಗಳು ಮುಂದಿನ ಪೀಳಿಗೆಗೂ ತಿಳಿಯುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.
ಉಪನ್ಯಾಸಕಿ ಡಾ. ಸಿ.ಎಂ.ಸುಲೋಚನಾ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಸವಿತಾ ರಮೇಶ್ ಆಶಯ ಭಾಷಣ ಮಾಡಿದರು. ಸಮ್ಮೇಳನಾಧ್ಯಕ್ಷ ಹೊಸೂರು ಪುಟ್ಟರಾಜು, ವೈ.ಎಂ.ತಿಪ್ಪೇಶ್, ಶೂದ್ರ ಶ್ರೀನಿವಾಸ್ ಇದ್ದರು.