ನ್ಯೂಸ್

ಎಸ್.ಟಿ ವರ್ಗಕ್ಕೆ ಕಾಡುಗೊಲ್ಲ ಸಮುದಾಯ; ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ ಮುಖಂಡರು

ಬೆಂಗಳೂರು: ಕಾಡುಗೊಲ್ಲ, ಅಡವಿಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳ ಜನರನ್ನು ಪರಿಶಿಷ್ಠ ವರ್ಗದ ಪಟ್ಟಿಗೆ ಸೇರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸಮುದಾಯದ ಮುಖಂಡರು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.

ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರೊಂದಿಗೆ ದೇವೇಗೌಡರು, ಈ ಸಮುದಾಯ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪುರೋಭಿವೃದ್ಧಿ ಹೊಂದಲು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರ ಜತೆ ಚರ್ಚೆ ನಡೆಸಿದ ದೇವೇಗೌಡರು, ನನ್ನ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರಿಗೆ ಕಳಿಸಿಕೊಟ್ಟರು. ತಕ್ಷಣವೇ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ತಮ್ಮ ಮನವಿಯನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ ನನಗೆ ಪತ್ರದ ಮುಖೇನ ತಿಳಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ಈ ಬಗ್ಗೆ ತಾವು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆ. ಅವರೂ ಕೂಡ ಮನವಿ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ಬರೆದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತಿತರ ಮುಖಂಡರು ಹಾಜರಿದ್ದರು.