ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾಯಜ್ಞಾ , ಕೆಂಡಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಮತ್ತು ಮಕ್ಕಳು. 
ನ್ಯೂಸ್

ಕಾಡಸಿದ್ದೇಶ್ವರ ಮಠದ ಜಾತ್ರೆ ಸಂಪನ್ನ; ವಿದ್ಯಾಯಜ್ಞ, ಸಂಕಲ್ಪ, ಕೆಂಡಾರ್ಚನೆ ಭಕ್ತರ ದಂಡು

ನೊಣವಿನಕೆರೆ: ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಹಿರಿಯ ಶ್ರೀಗಳಾದ ಶ್ರೀ ಕರಿಸಬವಸ್ವಾಮೀಜಿ ಅವರ 230ನೇ ವಾರ್ಷಿಕ ಸ್ಮರಣೆ, 19ನೇ ಗುರುಗಳಾದ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರ 15ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನವಾಯಿತು.

ಜಾತ್ರಾ ಅಂತಿಮ ದಿನವಾದ ಗುರುವಾರ ಬೆಳಗ್ಗೆ 5ಗಂಟೆಗೆ 101 ಮಕ್ಕಳ ವಿದ್ಯಾಯಜ್ಞಾ, ಸಂಕಲ್ಪ, ಕೆಂಡಾರ್ಚನೆ ಬಳಿಕ 11.45ಕ್ಕೆ ಮೂರು ಜೋಡಿಗಳ ಸಾಮೂಹಿಕ ವಿಹಾಹ ನಡೆಯಿತು.

ಮಧ್ಯಾಹ್ನ 12ಕ್ಕೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಡಾ.ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಶ್ರೀಮಠಕ್ಕೆ 800 ವರ್ಷಗಳ ಇತಿಹಾಸವಿದ್ದು, 19ಗುರುಗಳು ಪೀಠಾಧಿಪತಿಗಳಾಗಿ ಹೋಗಿದ್ದಾರೆ. ಪ್ರಸ್ತುತ 20ನೇ ಗುರುಗಳ ಅವಧಿಯಲ್ಲಿ, ಶ್ರೀ ವೀರಗಂಗಾಧರ ಸ್ವಾಮೀಜಿ ಮಾರ್ಗದರ್ಶನದ ಮೇರೆಗೆ ರಾಜಕೀಯ ವ್ಯಕ್ತಿಗಳು. ಭಕ್ತರ ಸಹಕಾರದೊಂದಿಗೆ ಗುರುಗಳ ಅನುಷ್ಟಾನ ಶಿಲಾ ಮಂಟಪ ನಿರ್ಮಾಣವಾಗಿದೆ ಎಂದರು.

ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಗುರುವಾರ ಆಯೋಜಿಸಿದ್ದ

ವಿದ್ಯಾಯಜ್ಞಾ , ಕೆಂಡಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರು ಮತ್ತು ಮಕ್ಕಳು.

ಅಂತರಾಷ್ಟೀಯ ಖ್ಯಾತ ಭಾಷಣಕಾರ್ತಿ ಸುಧಾ ಬರಗೂರು ಉಪನ್ಯಾಸ ಕಾರ್ಯಕ್ರಮ, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಧಿಕಾರಿ ಬಿ.ಸೌಮ್ಯಾ ಅವರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಮಹಾರಾಷ್ಟ್ರದ ಕರ್ಜಗಿಯ ಶ್ರೀ ಶಿವಾನಂದ ಸ್ವಾಮೀಜಿ, ಬೆಂಗಳೂರು ವಿಭೂತಿಪುರಮಠದ ಶ್ರೀ ಡಾ.ಮಹಾಂತಲಿಂಗ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಶ್ರೀ ಡಾ. ಮಲಯ ಶಾಂತಮುನಿ ಸ್ವಾಮೀಜಿ, ಗುಬ್ಬಿ ತಾಲೂಕು ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಹೊನ್ನವಳ್ಳಿ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ, ಹುಣಸೇಘಟ್ಟ ಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ, ಮಾಜಿ ಶಾಸಕ ಕೆ.ಷಡಕ್ಷರಿ, ಬೆಂಗಳೂರು ಆಸರೆ ಆಸ್ಪತ್ರೆಯ ಜಗದೀಶ್ ಹಿರೇಮಠ್ ಇದ್ದರು.

ಅನ್ನತೋಪ್ರಾಣ ಪ್ರಾಣತೋ ಪರಾಕ್ರಮ: ಪಂಚತತ್ವಗಳಂತೆ ಪಂಚಪೀಠಗಳು ಅನ್ನ, ವಿದ್ಯೆ,ಆಶ್ರಯ ಕೇಳಿ ಬರುವ ಭಕ್ತರಿಗೆ ವೀರಶೈವ ಧರ್ಮದಲ್ಲಿ ಪಂಚಪೀಠಗಳ ಮೂಲ ತತ್ವಗಳಲ್ಲಿ ಮೊದಲನೇಯದಾಗಿ ಅನ್ನತೊ ಪ್ರಾಣ. ಪ್ರಾಣತೊ ಪರಾಕ್ರಮ ಅರ್ಥಾತ್ ಮನುಷ್ಯನಿಗೆ ಮೊದಲು ಅನ್ನ, ಬಳಿಕ ಅರಿವು, ತದನಂತರ ಬೇಡಿ ಬಂದವರಿಗೆ ಆಶ್ರಯ,ಆರೋಗ್ಯ ಮತ್ತು ಅಭಯ ನೀಡಲು ಯಾರಲ್ಲೂ ಭೇದ ತೋರದೇ ಎಲ್ಲ ಭಕ್ತರಿಗೂ ಲಿಂಗದೀಕ್ಷೆ ಕೊಟ್ಟು, ಆಧ್ಯಾತ್ಮದಲ್ಲಿ ಸಮಾನತೆ ತೋರಿದ್ದಾರೆ ಎಂದು ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.

ಗುರುಗಳಿಂದ ಅರಿವು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಮಾರ್ಗ ತೋರುವುದು ಎರಡನೇ ತತ್ವವಾದರೆ 3ನೇಯದಾಗಿ ಪ್ರತಿದಿನ ಮನೆಯ ಹಾಗೂ ಆಂಗಣದ ಕಸ ಗುಡಿಸಿ ಸ್ವಚ್ಛಗೊಳಿಸುವಂತೆ ಭಕ್ತರ ಮನಸ್ಸಿನಲ್ಲಿರುವ ಕಲ್ಮಶವನ್ನು ದೀಕ್ಷೆ ಮೂಲಕ ಕಿತ್ತು ಹಾಕುವುದಾಗಿದೆ. 4 ಹಾಗೂ 5ನೇ ತತ್ವಗಳಲ್ಲಿ ಗುರುಗಳಿಗೆ ಬದ್ಧರಾಗಿ ಮಾನವ ಧರ್ಮಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ದೇಶಕ್ಕಾಗಿ, ಸಮಾಜಕ್ಕಾಗಿ ಮಾದರಿಯಾಗಿ ಬದುಕಲು ಮಾರ್ಗದರ್ಶನ ನೀಡುವುದಾಗಿದೆ ಎಂದರು.

ಕತೃ ಗದ್ದುಗೆಗೆ ಹಣ್ಣಿನ ವಿಶೇಷ ಅಲಂಕಾರ

ಕಾಡಸಿದ್ದೇಶ್ವರ ಮೂಲ ಕತೃ ಗದ್ದಿಗೆಗೆ ಹಣ್ಣಿನ ವಿಶೇಷ ಅಲಂಕಾರ ಮಾಡಲಾಗಿತ್ತು.