ಮೈಸೂರು: ಕಪಿಲಾ ನದಿ ಮೂಲದಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಬಿನಿ ಯೋಜನೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನೀರು ಸರಬರಾಜು ಕೇಂದ್ರಗಳಾದ ಹುಲ್ಲಹಳ್ಳಿ ಬಳಿಯ ಬಿದರಗೋಡು ಹಾಗೂ ಕೆಆರ್‌ಎಸ್ ಹಿನ್ನೀರು ಹಳೇ ಉಂಡುವಾಡಿ ಯೋಜನೆಗಳಿಗೆ ಭಾನುವಾರ ಭೇಟಿ ನೀಡಿ, ಕಾಮಗಾರಿ ಪರಿವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದ 50 ವರ್ಷದ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಬಿನಿ ಹಾಗೂ ಕಾವೇರಿ ನದಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಎರಡು ಯೋಜನೆಗಳಿಂದ 2055ರ ವೇಳೆಗೂ ನಗರಕ್ಕೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ ಎಂದರು.
ಬಿದರಗೋಡು ಕಬಿನಿ ಯೋಜನೆ ಮುಕ್ತಾಯ ಹಂತ ತಲುಪಿದೆ. ಇನ್ನೊಂದು ತಿಂಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ. 90 ಎಂಎಲ್‌ಡಿ ನೀರು ಪಡೆಯುವ ಸಾಮರ್ಥ್ಯ ಇರುವ ಈ ಯೋಜನೆಯಿಂದ ಈಗ 60 ಎಂಎಲ್‌ಡಿ ನೀರು ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಈ ಯೋಜನೆಯಿಂದ ಕಡಕೊಳ, ಶ್ರೀರಾಂಪುರ, ಬೋಗಾದಿ ಪಟ್ಟಣ ಪಂಚಾಯಿತಿ, ಕೆಎಚ್‌ಬಿ ಬಡಾವಣೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಗೆ ನೀರು ಸರಬರಾಜು ಮಾಡಲಾಗುವುದು. ವರುಣ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರ ಬಹುತೇಕ ಬಡಾವಣೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಕಬಿನಿ ನದಿ ಮೂಲದಿಂದ ಕುಡಿಯುವ ನೀರನ್ನು ವೃದ್ಧಿಸುವ ಯೋಜನೆಯನ್ನು 2008ನೇ ಸಾಲಿನಲ್ಲಿ ಜಲ ಮಂಡಳಿಯಿಂದ ರೂಪಿಸಿ ಯೋಜನಾ ವರದಿ ತಯಾರಿಸಲಾಗಿದೆ. ಸದರಿ ಯೋಜನಾ ವರದಿಯಂತೆ ಕಬಿನಿ ನೀರು ಸರಬರಾಜು ಯೋಜನೆಯನ್ನು 3 ಹಂತದಲ್ಲಿ ಒಟ್ಟು 184 ಎಂಎಲ್ಡಿ ಸಾರ್ಮಥ್ಯಕ್ಕೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಸದರಿ ಉನ್ನತೀಕರಣದ ಯೋಜನೆಯಡಿ ಕೆಂಬಾಳು ಜಲ ಶುದ್ಧೀಕರಣ ಘಟಕದಲ್ಲಿ ಹೊಸದಾಗಿ 60 ಎಂಎಲ್ಡಿ ಸಾಮರ್ಥ್ಯದ ಫ್ಲಾಕ್ಯೂಲೇಟರ್ ಮತ್ತು ಟ್ಯೂಬ್ಸೆಟ್ಟರ್ ಘಟಕವನ್ನು ಮತ್ತು ರ‌್ಯಾಪಿಡ್ ಸ್ಯಾಂಡ್ ಫಿಲ್ಟ್ರೇಷನ್ ಘಟಕಗಳನ್ನು ನಿರ್ಮಿಸಲಾಗಿದೆ. ದೂರ ಗ್ರಾಮದ ಸಬ್‌ಸ್ಟೇಷನ್‌ನಿಂದ ಕೆಂಬಾಳು ಯಂತ್ರಾಗಾರದವರೆಗೆ 11 ಕೆ.ವಿ ಎಕ್ಸ್‌ಪ್ರೆಸ್ ಭೂಗತ ಕೇಬಲ್ ಅಳವಡಿಸುವ, ಕೆಂಬಾಳು ಯಂತ್ರಾಗಾರ ಮತ್ತು ಪಿಂಜರಾಪೋಲ್ ಐಬಿಪಿಎಸ್‌ನಲ್ಲಿ ಹೊಸದಾಗಿ 2,500 ಎಚ್‌ಪಿ ಮತ್ತು 1,750 ಎಚ್‌ಪಿ ಸಾಮರ್ಥ್ಯದ ಪಂಪಿಂಗ್ ಯಂತ್ರೋಪಕರಣ ಅಳವಡಿಸುವ ಮತ್ತು ಇದಕ್ಕೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಜಿ.ಡಿ.ದೇವೇಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮಾಜಿ ಉಪ ಮೇಯರ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್‌ಆಸಿಫ್ ಇತರರು ಇದ್ದರು.