ನ್ಯೂಸ್

ದೇವರಿಗೆ ಮೋಸ ಮಾಡಿದವರ ನೀತಿ ಪಾಠ ಬೇಕಿಲ್ಲ : ಎಚ್‌ಡಿಕೆ ವಿರುದ್ಧ ಕೆ.ಶೇಷಾದ್ರಿ ಆಕ್ರೋಶ

Ramanagara

ರಾಮನಗರ :  ದೇವರ ಎದುರು ಪ್ರಮಾಣ ಮಾಡಿ ಮಾತು ತಪ್ಪಿದವರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಜಗಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾವಿಗೆ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸ್ವಾವಲಂಬಿ ಆಗುವವರೆಗೂ ಮಂತ್ರಿಯೂ ಆಗುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಕುಮಾರಸ್ವಾಮಿ, ಬಿಜೆಪಿಯೊಟ್ಟಿಗೆ ಸೇರಿ ಅಧಿಕಾರ ಹಿಡಿದರು. ನಂತರ ಅವರಿಗೆ ಅಧಿಕಾರ ಕೊಡದೆ ಮೋಸ ಮಾಡಿದರು.

ನಂತರ ಕಾಂಗ್ರೆಸ್ ಸೇರಿ ಅಧಿಕಾರ ನಡೆಸಿ, ಡಿ.ಕೆ.ಶಿವಕುಮಾರ್ ಮತ್ತು ನಾನು ಜೋಡೆತ್ತು ಎಂದರು. ಈಗ ಅವರನ್ನೇ ಟೀಕೆ ಮಾಡುತ್ತಿದ್ದಾರೆ. ರಾಮನಗರ ಕರ್ಮ ಭೂಮಿ ಎಂದು ಹೇಳಿಕೊಂಡು ಎರಡು ಬಾರಿ ರಾಜೀನಾಮೆ ನೀಡಿ ಜನತೆಯನ್ನು ಇಲ್ಲದ ಚುನಾವಣೆಗೆ ದೂಡಿದ್ದಾರೆ. ಇವರು ನುಡಿದಂತೆ ನಡೆಯುವ ಮಹಾನ್ ನಾಯಕರು ಎಂದು ಟೀಕಿಸಿದರು.

ನಿಜವಾದ ಕಾರಣ ಇಟ್ಟುಕೊಂಡು ಹೋರಾಟ ಮಾಡಿದವರರನ್ನು 420 ಎಂದು ಅವರು ಕರೆದಿದ್ದು, ಈ ವಿಚಾರದಲ್ಲಿ 420-840 ಯಾರು ಎಂದು ಜನತೆಯೇ ತೀರ್ಮಾನ ಮಾಡಬೇಕಿದೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ಸಿ.ಎಂ.ಲಿಂಗಪ್ಪ ಅವರ ನಂತರ ಎಚ್‌ಡಿಕೆ ಒಂದೇ ಒಂದು ನಿವೇಶನವನ್ನು ಸಾರ್ವಜನಿಕರಿಗೆ ನೀಡಿದ್ದರೆ ತೋರಿಸಲಿ.

ಬಡವರಿಂದ 5001 ರೂ. ಕಟ್ಟಿಸಿಕೊಂಡು 14 ವರ್ಷಗಳು ಕಳೆದರೂ ನಿರ್ಮಾಣ ಮಾಡಿರುವ ಮನೆ ಕೊಡಲು ಸಾಧ್ಯವಾಗಿಲ್ಲ, ರಾಮನಗರ ಕಸದ ಸಮಸ್ಯೆ, ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಅವರ ಕೈಯಲ್ಲಿ ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಪ್ರತಿಭಟನೆ ಮಾಡಿದವರು ಯಾರು ಎಂದು ಎಚ್‌ಡಿಕೆ ಕೇಳಿದ್ದಾರೆ. ಅವರಿಗೆ ರಾಮನಗರದವರು ಯಾರು ಎನ್ನುವುದು 17 ವರ್ಷ ಕಳೆದರೂ ಇನ್ನೂ ಗೊತ್ತಾಗದೆ ಇರುವುದರಿಂದಲೇ ಹೊರಗಿನವರು ಯಾರು ಎನ್ನುವುದು ಗೊತ್ತಾಗುತ್ತದೆ ಎಂದರು.

ಅಲ್ಲದೆ, ತಮ್ಮನ್ನೂ ಏಕ ವಚನದಲ್ಲಿ ಸಂಬೋಧಿಸಿದ್ದಾರೆ. ಆದರೆ ನಾನು ಆ ರೀತಿ ಮಾತನಾಡುವುದಿಲ್ಲ, ವಯಸ್ಸಾಗುತ್ತಿದ್ದಂತೆ ನಮ್ಮ ಬುದ್ದಿಯೂ ಮಾಗಬೇಕು. ನಿಮ್ಮ ಧೋರಣೆ ಬಿಡದಿದ್ದರೆ ಈಗ ಕೇವಲ ರಾಮನಗರ ನಗರ ಪ್ರದೇಶದ ಜನತೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಮನಗರ ಮತ್ತು ಗ್ರಾಮೀಣ ಜನರನ್ನು ಸೇರಿಸಿ ನಿಮ್ಮ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಮುಯೀಬ್ ಪಾಷ, ಪಾರ್ವತಮ್ಮ, ಶಿವಕುಮಾರ್‌ಸ್ವಾಮಿ ಇದ್ದರು.