ನ್ಯೂಸ್

ಕೆ-ಸೆಟ್ ಪರೀಕ್ಷೆಗೆ ಅಧಿಸೂಚನೆ ಪ್ರಕಟ: ಪರೀಕ್ಷಾ ಶುಲ್ಕ, ವಯೋಮಿತಿ ಸೇರಿ ಏನೆಲ್ಲ ಅರ್ಹತೆಗಳಿರಬೇಕು?

ಎನ್.ಎಲ್. ಶಿವಮಾದು

ಬೆಂಗಳೂರು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 (ಕೆ-ಸೆಟ್) ಅನ್ನು ನ.26ರಂದು ನಡೆಸಲಾಗುತ್ತಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಕೆಇಎ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಹಾಗೂ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಇ-ಪೋಸ್ಟ್ ಕಚೇರಿಗಳಲ್ಲಿ ಶುಲ್ಕ ಪಾವತಿಸಲು ಅ.3 ಕೊನೆಯ ದಿನವಾಗಿದೆ.

ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ ಮತ್ತು 3ಎ, 3ಬಿ ಅಭ್ಯರ್ಥಿಗಳಿಗೆ 1,000 ರೂ., ಪ್ರವರ್ಗ-1, ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರು ಮತ್ತು ತೃತೀಯ ಲಿಂಗಿಗಳಿಗೆ 700 ರೂ. ಶುಲ್ಕ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಿಲ್ಲ ಎಂದು ತಿಳಿಸಿದೆ.

2 ಅವಧಿಯಲ್ಲಿ ಪತ್ರಿಕೆ-1 ಮತ್ತು 2 ಅನ್ನು ನಡೆಸಲಾಗುತ್ತದೆ. ಪತ್ರಿಕೆ-1 ಅನ್ನು 100 ಅಂಕಗಳಿಗೆ ನ.26ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ನಡೆಸಲಿದೆ. ಈ ಪ್ರಶ್ನೆಯು 50 ಪ್ರಶ್ನೆಗಳನ್ನು ಹೊಂದಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಯನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯಗಳನ್ನು ಅಳೆಯಲಿದೆ.

ಪತ್ರಿಕೆ-2 ಅನ್ನು 200 ಅಂಕಗಳಿಗೆ (100 ಪ್ರಶ್ನೆ) ಅದೇ ದಿನ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ನಡೆಯಲಿದೆ. 2 ಗಂಟೆಯ ಅವಧಿಯಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿರುತ್ತದೆ.

ತಪ್ಪಾದ ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಸಾಮಾನ್ಯ ಪತ್ರಿಕೆ ಹಾಗೂ 41 ವಿಷಯಗಳ ಪಠ್ಯಕ್ರಮವನ್ನು ಪ್ರಾಧಿಕಾರದ ವೆಬ್‌ಸೈಟ್ ಠಿಠಿ//ಛಿ.ಚ್ಟ.್ಞಜ್ಚಿ.ಜ್ಞಿ ನಲ್ಲಿ ನೀಡಲಾಗಿದೆ. ವಿಷಯಗಳ ಕೋಡ್‌ಗಳು, ಅರ್ಜಿ ಸಲ್ಲಿಸುವ ವಿಧಾನ ಸೇರಿ ಇತರೆ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.