ನ್ಯೂಸ್

ಸಚಿವ ಸ್ಥಾನಕ್ಕೆ ಕೆ.ಎನ್​ ರಾಜಣ್ಣ ರಾಜೀನಾಮೆ|kn rajanna

ಸಚಿವ ಕೆಎನ್​ ರಾಜಣ್ಣ ಹೇಳಿಕೆಯೊಂದನ್ನು ನೀಡಿ ತಮ್ಮದೇ ಪಕ್ಷದ ನಾಯಕರು ಮುಜುಗುರಕ್ಕೀಡಾಗುವಂತೆ ಮಾಡಿದ್ದರು. ಕೆಎನ್​ ರಾಜಣ್ಣ ಹೇಳಿಕೆಯಿಂದ ಹೈಕಮಾಂಡ್ ತೀವ್ರ ಅಸಮಾಧಾನಗೊಂಡು, ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮತಗಳ್ಳತನ ಆರೋಪದ ಬಗ್ಗೆ ಹೇಳಿಕೆ ನೀಡಿದ್ದ ರಾಜಣ್ಣ, ಮಹದೇವಪುರದಲ್ಲಿ ನಮ್ಮ ಲೋಪ ಇದೆ. ಲೋಕಸಭೆ ಚುನಾವಣೆ ವೇಳೆ ನಾವೇ ಅಧಿಕಾರದಲ್ಲಿದ್ದೆವು ಎಂದಿದ್ದರು. ರಾಹುಲ್ ಗಾಂಧಿ ಅವರು ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ಆದರೆ ಸಚಿವ ಕೆ.ಎನ್. ರಾಜಣ್ಣ ಇದನ್ನು ವಿರೋಧಿಸಿ, ಆಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ವೋಟರ್ ಐಡಿ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ಹಿನ್ನೆಲೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕೆ.ಎನ್. ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಇನ್ನೂ ಈ ರಾಜೀನಾಮೆ ವಿಚಾರದ ಬಗ್ಗೆ ಸಚಿವ ಕೆಎನ್​ ರಾಜಣ್ಣ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂತರ ಸ್ಪಷ್ಟನೆ ನೀಡುತ್ತೇನೆ. ಯಾವ ವಿಚಾರಕ್ಕೆ ಹೈಕಮಾಂಡ್​ ನನ್ನ ಮೇಲೆ ಗರಂ ಆಗಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

(ಏಜೆನ್ಸೀಸ್)