ನ್ಯೂಸ್

ಬೆಂಗಳೂರಿನಲ್ಲಿ ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಉದ್ಘಾಟನೆ|K.H. Patil School of Law

ಬೆಂಗಳೂರು: ರಾಜ್ಯಕ್ಕೆ ಗುಣಮಟ್ಟದ ಶಿಕ್ಷಣ ನೀಡುವ ಕಾನೂನು ಶಾಲೆ ಅವಶ್ಯಕತೆ ಇದೆ. ಕಾನೂನು ಕಾಲೇಜಿನಲ್ಲೂ ಕೃತಕ ಬುದ್ಧಿಮತ್ತೆ(ಎಐ), ತಂತ್ರಜ್ಞಾನ ಅಳವಡಿಕೆ ಆಗಬೇಕಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ(Veerappa moily) ಅಭಿಪ್ರಾಯಪಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಕೆ.ಎಚ್.ಪಾಟೀಲ ಜನ್ಮ ಶತಮಾನೋತ್ಸವ ಮತ್ತು ಎಚ್.ಕೆ.ಪಾಟೀಲ ಸ್ಕೂಲ್ ಆಫ್ ಲಾ ಉದ್ಘಾಟನೆ(K.H. Patil School of Law inaugurated in Bengaluru) ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಕೆಲಸ ಇಲ್ಲದೇ ಇದ್ದವರಿಗೆ ಕಾನೂನು ಶಿಕ್ಷಣ ಎಂಬ ಭಾವನೆ ಹಿಂದೆ ಇತ್ತು. ಈಗ 26 ನ್ಯಾಷನಲ್ ಲಾ ಸ್ಕೂಲ್ ಇವೆ. ಇವು ಐಐಟಿ/ಐಐಎಂನ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಕೆ.ಎಚ್.ಪಾಟೀಲ್ ಸ್ಕೂಲ್ ಆ್ ಲಾ ಕೂಡ ಕಾನೂನು ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಡುವ ವಿಶ್ವಾಸ ನನಗಿದೆ ಎಂದರು.

ಕೆಲವು ರಾಜ್ಯಗಳಲ್ಲಿ ಎರಡೆರಡು ನ್ಯಾಷನಲ್ ಲಾ ಸ್ಕೂಲ್ ಇವೆ. ಬೆಂಗಳೂರಿನಂತೆಯೇ ಮಂಗಳೂರಿನಲ್ಲಿ ಒಂದು ನ್ಯಾಷನಲ್ ಲಾ ಸ್ಕೂಲ್ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಕೆ.ಎಚ್.ಪಾಟೀಲರು ದಾರ್ಶನಿಕ ನಾಯಕ, ನಿಷ್ಠುರವಾದಿ. ಅವರಂತಹ ಅಪರೂಪದ ರಾಜಕಾರಣಿ ಸಿಗುವುದು ಬಹಳ ಕಷ್ಟ. ನಿಷ್ಟುರವಾದಿ ಆಗದೇ ಇದ್ದಿದ್ದರೆ ಅವರು ಕರ್ನಾಟಕದ ಮುಖ್ಯಮಂತ್ರಿ ಆಗುತ್ತಿದ್ದರು. ಏನಾದರೂ ಹೇಳಿದರೆ ಡ್ಯಾಮೇಜ್ ಆಗುತ್ತದೆ ಎಂದು ಯೋಚನೆ ಮಾಡುತ್ತಿರಲಿಲ್ಲ. ನಾವೆಲ್ಲರೂ ಅವರ ಹಾಕಿದ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣ ಅತ್ಯವಶ್ಯ

ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಉದ್ಘಾಟನೆ ಮಾಡಿದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ರಾಜ್ಯದಲ್ಲಿ 160 ಕಾನೂನು ಕಾಲೇಜುಗಳಿವೆ. ಅವುಗಳಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಕಾನೂನು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆ ಕೆಲಸವನ್ನು ಕೆ.ಎಚ್.ಪಾಟೀಲ ಸ್ಕೂಲ್ ಆ್ ಲಾ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಸಾಧನೆ ಮಾಡಬೇಕೆಂಬ ಸಂಕಲ್ಪ ಮಾಡಿದ ವ್ಯಕ್ತಿಗೆ ಯಾವುದೂ ಅಸಾಧ್ಯವಲ್ಲ. ಅಂತಹ ಕೆಲಸವನ್ನು ಕೆ.ಎಚ್.ಪಾಟೀಲರು ಮಾಡಿದ್ದಾರೆ. ಗದಗದಲ್ಲಿ ಅವರು ಮಾಡಿದ ಸಾಧನೆ ನೋಡಿ ನನಗೆ ಆಶ್ಚರ್ಯವಾಯಿತು ಎಂದು ಪ್ರಶಂಸಿಸಿದರು.

ಒಳ್ಳೆಯ ನಾಯಕರ ಕೊರತೆ ಇದೆ

ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಮಾತನಾಡಿ, ಇವತ್ತು ರಾಜಕೀಯ ವಾತಾವರಣ ಕಲುಷಿತವಾಗುತ್ತಿದೆ. ಬೇಗ ಅಧಿಕಾರಕ್ಕೆ ಬರಬೇಕು, ಹಣ ಮಾಡಬೇಕು ಎನ್ನುವ ಹಪಾಪಹಿ ಶುರುವಾಗಿದೆ. ಜನರು ಆಯ್ಕೆ ಮಾಡಿದ್ದು ಯಾಕೆ ಎಂದು ಯೋಚನೆ ಮಾಡುತ್ತಿಲ್ಲ. ಸಮಾಜದಲ್ಲಿ ಒಳ್ಳೆಯ ನಾಯಕರ ಕೊರತೆ ಇದೆ ಎಂದು ಹೇಳಿದರು.

ನನ್ನ ಹೃದಯದಲ್ಲಿ ಕೆಎಚ್‌ಪಿ ಸಿಎಂ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನಾನು ಈ ಸ್ಥಾನಕ್ಕೆ ಬಂದು ನಿಲ್ಲಲು ಕೆ.ಎಚ್.ಪಾಟೀಲರ ಪಾತ್ರ ಮುಖ್ಯ. ವಿಶಾಲ ಕರ್ನಾಟಕ ಹೋರಾಟದಲ್ಲಿ ನಾವೆಲ್ಲ ಒಟ್ಟಿಗೆ ಇದ್ದೆವು. ನಾನು ಚುನಾವಣೆಗೆ ನಿಲ್ಲಬೇಕು ಅಂತ ಹೋದೆ. ಆಶೀರ್ವಾದ ಮಾಡಿ ಕಳುಹಿಸಿದ್ದರು. ಚುನಾವಣೆ ಗೆದ್ದು ಭೇಟಿಯಾಗಿದ್ದೆ, ತುಂಬ ಸಂತಸಗೊಂಡರು. ಅವರು ನನ್ನನ್ನು ತಮ್ಮ ಮಗನಂತೆ ಕಂಡರು. ಹುಲಕೋಟಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಮಾಡಿದವರು. ಅಬ್ದುಲ್ ಕಲಾಂ ಕೂಡ ಅಲ್ಲಿಗೆ ಭೇಟಿ ನೀಡಿದ್ದರು. 18 ಜನರು ಮುಖ್ಯಮಂತ್ರಿಯವರನ್ನ ನಾನು ನೋಡಿದ್ದೇನೆ. ಆದರೆ, ಕೆ.ಎಚ್. ಪಾಟೀಲರು 19ನೇ ಮುಖ್ಯಮಂತ್ರಿಯಾಗಿ ನನ್ನ ಹೃದಯದಲ್ಲಿದ್ದಾರೆ ಎಂದರು.

ಅಂಜಿಕೆ ಎನ್ನುವುದೇ ಅವರಲ್ಲಿರಲಿಲ್ಲ

ಗೃಹ ಸಚಿವ ಡಾ.ಜಿ ಪರಮೇಶ್ವರ ಮಾತನಾಡಿ, ಇವತ್ತಿನ ದಿನದಲ್ಲಿ ಲೆಕ್ಕಾಚಾರದ ರಾಜಕಾರಣಿ ನಡೆಯುತ್ತಿದೆ. ಇದು ಬಹಳ ನೋವಿನ ವಿಚಾರ. ಅದನ್ನು ಹೊರತುಪಡಿಸಿ ಇದ್ದವರು ಕೆ.ಎಚ್. ಪಾಟೀಲರು. ಅಂಜಿಕೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲವೇನೋ. ಧೈರ್ಯದಿಂದ ಹೋರಾಡುವ ವ್ಯಕ್ತಿತ್ವ ಹೊಂದಿದ್ದರು. ಯಾವುದೇ ನಿರ್ಣಯ, ತೀರ್ಮಾನ ಮಾಡುವಲ್ಲಿ ಯಾರಿಗೂ ಕಾಯುತ್ತಿರಲಿಲ್ಲ.

ದೇವರಾಜ್ ಅರಸು ಅವರು ಕಚೇರಿಗೆ ಬಂದಾಗ ಕೆ.ಎಚ್.ಪಾಟೀಲರು ಅವರನ್ನು ಹೊರಗೆ ನಿಲ್ಲಿಸಿದ್ದರಂತೆ. ಆ ಧೈರ್ಯ ಅವರಲ್ಲಿತ್ತು, ಆ ರೀತಿಯ ವ್ಯಕ್ತಿತ್ವ ಅವರದ್ದು. ರಾಜಕಾರಣದಲ್ಲಿ ಈಗ ಹೊಂದಾಣಿಕೆ ಮುಖ್ಯವಾಗಿದೆ. ಆದರೆ ಆಗ ಆ ರೀತಿಯ ರಾಜಕಾರಣ ಇರಲಿಲ್ಲ. ರಾಜ್ಯದ ಹೆಸರು ಕರ್ನಾಟಕ ಎಂದು ಆಗಬೇಕಾದರೆ ಗದಗದಲ್ಲಿ ನಡೆದ ಸಮ್ಮೇಳನದಲ್ಲಿ ನಿರ್ಣಯ ಮಾಡಿದ್ದರು. ಮೈಸೂರು ಕರ್ನಾಟಕ ಬದಲಾವಣೆ ಆಗಿದ್ದು ಆಗ. ವಿಧಾನ ಪರಿಷತ್‌ನಲ್ಲಿ ಆ ನಿರ್ಣಯ ಮಾಡಿದ್ದರು ಎಂದು ನೆನಪಿಸಿದರು.

ಶಾಶ್ವತವಾಗಿ ಹೆಸರು ಉಳಿಸಿ ಹೋದ ವ್ಯಕ್ತಿ

ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ರೀದ್ ಮಾತನಾಡಿ, ಹುಟ್ಟುವಾರ ಹೆಸರು ಇರುವುದಿಲ್ಲ. ಹುಟ್ಟಿದ ಮೇಲೆ ಹೆಸರು ಬರುತ್ತದೆ. ಆ ಹೆಸರು ಉಳಿಸಿ ಹೋಗುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮಗೆ ಕೆ.ಎಚ್.ಪಾಟೀಲರು ಮಾದರಿಯಾಗಬೇಕು ಎಂದು ತಿಳಿಸಿದರು.

ಕಾನೂನು ಸಚಿವ ಎಚ್.ಕೆ.ಪಾಟೀಲರು ತಂದೆ ನಡೆದ ಹಾದಿಯಲ್ಲೇ ನಡೆಯುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಸಚಿವರಾದ ಎಚ್.ಕೆ.ಪಾಟೀಲ, ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಎನ್.ಎಸ್.ಬೋಸರಾಜು, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಆರ್.ಬಿ.ತಿಮ್ಮಾಪುರ, ಶರಣ ಪ್ರಕಾಶ ಪಾಟೀಲ, ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪ್ಪಾಜಿ ನಾಡಗೌಡ, ಎನ್.ಎಚ್.ಕೋನರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ನಾನು ಕಂಡ ಧೀಮಂತ ನಾಯಕ ಕೆ.ಎಚ್..ಪಾಟೀಲರು. ನಾನು ಕೆ.ಎಚ್.ಪಾಟೀಲರ ಮಾರ್ಗದರ್ಶನದಲ್ಲಿ ನಾನು ಬೆಳೆದವನು. ಹುಲಕೋಟೆ ಹುಲಿ ಹೆಸರು ಪಡೆದ ಪಾಟೀಲರು ಸಹಕಾರ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ತಂದೆ ಹಾಕಿಕೊಟ್ಟ ದಾರಿಯಲ್ಲಿ ಎಚ್.ಕೆ.ಪಾಟೀಲರು ನಡೆಯುತ್ತಿದ್ದಾರೆ. ಕೆ.ಎಚ್.ಪಾಟೀಲರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲ ಹೋಗೋಣ.

-ಕೆ.ಜೆ.ಜಾರ್ಜ್, ಇಂಧನ ಸಚಿವ.