ಗುರುಶಿಷ್ಯ ಸಂಬಂಧವನರಸಲೆಂದು ಹೋದರೆ
ತಾನೆ ಗುರುವಾದ ತಾನೆ ಶಿಷ್ಯನಾದ
ತಾನೆ ಲಿಂಗವಾದ.
ಗುಹೇಶ್ವರ, ನಿಮ್ಮ ಶರಣನ ಕಾಯದ ಕೈಯಲ್ಲಿ
ಲಿಂಗವ ಕೊಟ್ಟರೆ ಭಾವ ಬತ್ತಲೆಯಾಯಿತ್ತು.
ಪ್ರಸ್ತುತ ವಚನದಲ್ಲಿ ಎರಡು ಸಂಗತಿಗಳು ಮುನ್ನೆಲೆಯಲ್ಲಿವೆ.
ಒಂದು, ಗುರು-ಶಿಷ್ಯ ಸಂಬಂಧದ ಅರಸುವಿಕೆ; ಇನ್ನೊಂದು, ಶರಣನ ಕಾಯದಲ್ಲಿ - ಕಾಯದ ಕೈಯಲ್ಲಿ - ಯಾವುದು ಸಂಭವಿಸಿತೋ ಅದು. ಗ್ರಹಿಕೆಯ ಅನುಕೂಲಕ್ಕಾಗಿ ಕಾಯವನ್ನೇ ವಿಶ್ಲೇಷಣೆಯ ಪ್ರಾರಂಭದ ಬಿಂದುವನ್ನಾಗಿ ಮಾಡಿಕೊಳ್ಳಬಹುದು.
ಆದರೆ ಶರಣತ್ವದಲ್ಲಿ ಕಾಯಕತ್ವದ ಬಿಚ್ಚಿಕೊಳ್ಳುವಿಕೆ ಪ್ರಾರಂಭವಾಗುತ್ತದೆ. ಅನಂತತೆಯ ಭಾಗವಾಗಿ ತನ್ನ ಸಾಂತತೆಯನ್ನು ಗುರುತಿಸಿಕೊಳ್ಳುವುದರಲ್ಲೇ ಶರಣತ್ವವಿದೆ. ಈ ಹಿನ್ನೆಲೆಯಲ್ಲಿ ಶರಣತ್ವವೆನ್ನುವುದು ಆಯ್ಕೆಯ ಸಂಗತಿಯಾಗದೆ ಅಸ್ತಿತ್ವದ ಸಹಜತೆಯಲ್ಲಿ ನೆಲಸುವುದಾಗಿದೆ. ‘ಶರಣನ ಕಾಯದ ಕೈಯಲ್ಲಿ ಲಿಂಗವ ಕೊಡು’ವುದು ಈ ಸಹಜತೆಯೆಡೆಗಿನ ಚಲನೆಯ ಪ್ರಾರಂಭವಾಗಿದೆ.
ಲಿಂಗವು ಕಾಯವೂ ಹೌದು, ಅಕಾಯವೂ ಹೌದು. ಕಾಯ-ಅಕಾಯಗಳ ಸಂಗಮಬಿಂದುವೂ ಹೌದು. ಒಂದು ಕಡೆಯಿಂದ ಅದು ಮುಚ್ಚಿಕೊಂಡಂತೆ ತೋರುವುದು ಎಷ್ಟು ಸತ್ಯವೋ ಇನ್ನೊಂದು ಕಡೆಯಿಂದ ಅದು ಬಿಚ್ಚಿಕೊಂಡಂತೆ ತೋರುವುದೂ ಅಷ್ಟೇ ಸತ್ಯವಾಗಿದೆ. ಅಥವಾ ಮುಚ್ಚಿರುವುದನ್ನು ಬಿಚ್ಚುವುದಕ್ಕಾಗಿಯೇ ಅದು ತಾನೂ ಮುಚ್ಚಿಕೊಂಡಂತೆ ತೋರುತ್ತದೆ. ಭಾವವನ್ನು ಬತ್ತಲಾಗಿಸುವುದರಲ್ಲೇ ಲಿಂಗದ ಅಸ್ತಿತ್ವವಿದೆ.
ಈ ಹಿನ್ನೆಲೆಯಲ್ಲಿ ವಚನವು ಅರಿವಿನ ಮೀಮಾಂಸೆಯೊಂದನ್ನು ಮುಂದಿಡುತ್ತಿದೆ. ಸಾಮಾನ್ಯವಾಗಿ ಅರಿವಿನ ಸನ್ನಿವೇಶದಲ್ಲಿ ತಿಳಿಸುವವನು, ತಿಳಿಯುವವನು, ತಿಳಿವಳಿಕೆಯ ವಸ್ತು ಎಂಬಿವುಗಳನ್ನು ಕಲ್ಪಿಸಲಾಗುತ್ತದೆ. ಇವೆಲ್ಲದರ ಸಂಗಮದಲ್ಲಿ ತಿಳಿವಳಿಕೆ ಎನ್ನುವುದನ್ನೂ ಗುರುತಿಸಲಾಗುತ್ತದೆ. ಹೀಗೆ ಇವುಗಳ ಸಂದರ್ಭದಲ್ಲಿ ಗುರು-ಶಿಷ್ಯ ಸಂಬಂಧವೆನ್ನುವುದೊಂದಿದೆ. ಆದರೆ ವಚನದಲ್ಲಿ ಗುರು-ಶಿಷ್ಯ ಸಂಬಂಧವೆನ್ನುವುದು ಮರುಪರಿಶೀಲನೆಗೆ ಒಳಗಾಗುತ್ತಿದೆ. ಸಾಮಾನ್ಯವಾಗಿ ಈ ಸಂಬಂಧವನ್ನು ಬಾಹ್ಯವಾದ ಆಯಾಮದಲ್ಲಿ ಸ್ಥಾಪಿಸಲಾಗುತ್ತದೆ. ಆದರೆ ವಚನವು ಇದನ್ನು ಪಲ್ಲಟಿಸಿ ಆಂತರಿಕ ಆಯಾಮದಲ್ಲಿ ಮರುಸ್ಥಾಪನೆ ಮಾಡುತ್ತಲಿದೆ.
ಇಲ್ಲಿ ಕಾಯದ ವಿಸ್ತರಣೆ ಅಥವಾ ವಿಕಾಸದಲ್ಲಿಯೇ ಗುರುತನವೂ ಇದೆ, ಶಿಷ್ಯತ್ವವೂ ಇದೆ, ಲಿಂಗದ ನೆಲೆಗೊಳ್ಳುವಿಕೆಯೂ ಇದೆ. ಕಾಯವು ಲೋಕಸಂಬಂಧಿಯಾಗಿದ್ದಾಗ ಗುರುವು ಲೋಕದಲ್ಲಿರುತ್ತಾನೆ. ಆಗ ಶಿಷ್ಯನದೂ ಲೋಕದ ಅಸ್ತಿತ್ವವೇ ಆಗಿರುತ್ತದೆ. ಹೀಗಾಗಿ ಲಿಂಗವೂ ಲೋಕದಲ್ಲಿಯೇ ಸ್ಥಾಪನೆಗೊಳ್ಳುತ್ತದೆ. ಲೋಕದಲ್ಲಿನ ಗುರು-ಶಿಷ್ಯ-ಲಿಂಗದ ಸಂಬಂಧಗಳು ಪರಸ್ಪರ ಬಾಹ್ಯದಲ್ಲಿರುತ್ತವೆ. ಆದರೆ ವಚನವು ಈ ಬಾಹ್ಯವಾದವುಗಳನ್ನು ಆಂತರಿಕವಾಗಿಸುತ್ತಿದೆ. ಈ ಆಂತರಿಕತೆಯಲ್ಲಿಯೇ ವಚನದ ಮುಖ್ಯ ಸಂದೇಶವೂ ಇದೆ. ಎಲ್ಲ ಸಂಬಂಧಗಳ ಪಲ್ಲಟವೂ ಇದೆ.
ಈ ಎಲ್ಲ ಪ್ರಕ್ರಿಯೆ ಮುಖ್ಯವಾಗಿ ಕಾಯದಿಂದ ಅಕಾಯದ ಕಡೆಗೆ ಚಲಿಸುತ್ತಿದೆ. ಈ ಚಲನೆಗೆ ಕಾಯದ ಕೈಯಲ್ಲಿ ಬಂದ ಲಿಂಗವು ಪ್ರೇರಣೆಯಾಗಿದೆ. ವ್ಯಕ್ತಿಕೇಂದ್ರಿತವಾದುದನ್ನು ವಿಶ್ವಕೇಂದ್ರಿತವಾಗಿಸುವಲ್ಲಿ ಲಿಂಗದ ಪಾತ್ರವಿದೆ. ಏಕೆಂದರೆ ಅದು ವ್ಯಕ್ತಿಯ ಸಂದರ್ಭದಲ್ಲಿ ರೂಹನ್ನು ಪಡೆದ ವಿಶ್ವಾತ್ಮಕದ ಪ್ರತಿನಿಧಿಯಾಗಿದೆ. ಹೀಗಾಗಿ ಈ ಮೊದಲು ‘ಕಾಯದ ಕೈಯಲ್ಲಿ’ ಸಿಲುಕಿದ್ದ ಭಾವವು ಈಗ ಬತ್ತಲಾಗತೊಡಗುತ್ತದೆ. ಭಾವವು ಬತ್ತಲಾಗುವುದರಲ್ಲೇ ಅರಿವಿನ ಪರಿಧಿಯ ವಿಸ್ತರಣೆಯೂ ಇದೆ. ಇದು ಒಂದು ಕಡೆಯಿಂದ ವ್ಯಕ್ತಿಗತವಾದುದು ವಿಶ್ವಾತ್ಮಕವಾಗುವುದಾದರೆ ಇನ್ನೊಂದು ಕಡೆಯಿಂದ ವಿಶ್ವಾತ್ಮಕವು ವ್ಯಕ್ತಿಗತ ಸಂದರ್ಭದಲ್ಲಿ ವಾಸ್ತವವಾಗುವುದೂ ಆಗಿದೆ.
ಹೀಗಾಗಿ ಇಲ್ಲಿ ಅರಿವಿನ ವಿವರಣೆಯು ಶರಣತ್ವದ ವ್ಯಾಖ್ಯಾನದೊಂದಿಗೆ ಕೂಡಿಕೊಂಡಿದೆ. ಇಲ್ಲಿ ಅರಿಯುವಿಕೆಯು ಆಗುವಿಕೆಯಾಗಿದೆ. ಗುರುವಾಗುವುದು, ಶಿಷ್ಯನಾಗುವುದು, ಲಿಂಗವಾಗುವುದು ಎನ್ನುವಲ್ಲಿ ತನ್ನ ಕಾಯತ್ವದಿಂದ ಭಾವತ್ವದ ಕಡೆಗಿನ ವಿಕಸನವಿದೆ. ಈ ವಿಕಸನವು ‘ತನ್ನತನ’ದ ಕೇಂದ್ರದಲ್ಲಿ ಸಂಭವಿಸುವಂಥದಾಗಿದೆ ಎನ್ನುವುದೇ ವಚನದ ಪ್ರತಿಪಾದನೆಯಾಗಿದೆ.
ಗುರು-ಶಿಷ್ಯ-ಲಿಂಗಗಳನ್ನು ಬಹಿರಂಗದಲ್ಲಿ ಇರಿಸುವುದೆಂದರೆ ಅವುಗಳನ್ನು ಮನುಷ್ಯಬಾಹಿರವಾದ ವ್ಯವಸ್ಥೆಗಳಲ್ಲಿ ಕಟ್ಟಿಹಾಕುವುದೂ ಆಗಿದೆ. ಆದರೆ ವಚನವು ಈ ವ್ಯವಸ್ಥೆಗಳ ಕಾಯಗಳಿಂದಲೂ ಮನುಷ್ಯನನ್ನು ಬಿಡಿಸಿ ಅರಿವಿನ ಕೇಂದ್ರದಲ್ಲಿ ಮಾನವಪ್ರಾಧಾನ್ಯವನ್ನು ಸ್ಥಾಪಿಸುತ್ತಿದೆ.