ಶಿವಮೊಗ್ಗ: ಹಠಯೋಗ, ಲಯಯೋಗ, ರಾಜಯೋಗ ಸಾಧಕರಾಗಿ ಶಿವಯೋಗದ ಸಿದ್ಧಿ ಪಡೆದಿದ್ದ ಅಲ್ಲಮಪ್ರಭು ನಾಡಿನ ಅಧ್ಯಾತ್ಮ ಚೇತನದ ಜ್ಯೋತಿಯನ್ನು ಪ್ರಕಾಶಗೊಳಿಸಿದವರಲ್ಲಿ ಪ್ರಮುಖ ವಚನಕಾರರಾಗಿದ್ದಾರೆ. ಅವರ ವಚನ ಕಾಲದ ಭವ್ಯ ಪರಂಪರೆಯನ್ನು ನೆನೆಯುತ್ತಿದ್ದರೆ ಮೈಮನ ಪುಳಕವಾಗುತ್ತದೆ ಎಂದು ಆಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದರು.
ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದಲ್ಲಿ ಭಾನುವಾರ ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್‌ನಿಂದ ಅನುಭಾವ ಸಂಗಮ-89ನೇ ಕಾರ್ಯಕ್ರಮದಲ್ಲಿ ಅಲ್ಲಮರ ಅನುಭಾವ ವಿಷಯ ಕುರಿತು ಆಧ್ಯಾತ್ಮ ಪ್ರವಚನ ನೀಡಿ, ಅಪ್ರತಿಮ ಅನುಭಾವಿಯಾಗಿದ್ದ ಅಲ್ಲಮರು ತನ್ನಷ್ಟಕ್ಕೆ ತಾನು ಎಲ್ಲಿಯೋ ಗುಹಾವಾಸಿಯಾಗಿದ್ದು, ತನ್ನೊಬ್ಬನ ಉದ್ಧಾರವನ್ನು ಮಾತ್ರ ಬಯಸದೆ, ಲೋಕದ ಇತರ ಸಾಧಕರು ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸಿದ್ದರು ಎಂದರು.
ಭಗವಂತನ ಸಾನಿಧ್ಯ ಪಡೆಯಲು ಮನುಷ್ಯ ಧರ್ಮದಿಂದ ಮಾತ್ರ ಸಾಧ್ಯ. ಆದ್ದರಿಂದ ನಾವು ಅದನ್ನು ಅರ್ಥಮಾಡಿಕೊಳ್ಳಬೇಕು. ನುಡಿದಂತೆ ನಡೆದರೆ ಭಗವಂತನ ಸಾಕ್ಷಾತ್ಕಾರ ಎಂದು ತಿಳಿಸಿದರು.
ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀ ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಡಾ. ಸಿದ್ಧಲಿಂಗ ಸ್ವಾಮೀಜಿ, ಆಧ್ಯಾತ್ಮ, ಆತ್ಮ, ಪರಮಾರ್ಥನ ವಿಶ್ಲೇಷಣೆ ಕ್ಲಿಷ್ಟಕರ. ದೇವರನ್ನು ತೋರಿಸಲು, ವಿವರಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಬೇಕು. ಕ್ರಿಯೆಗಳನ್ನು ನಾನು ಮಾಡಿದ್ದಲ್ಲ, ಭಗವಂತ ಮಾಡಿಸಿದ್ದು ಎಂಬ ಭಾವ ಬೆಳೆಸಿಕೊಂಡರೆ ಮನುಷ್ಯತ್ವ ಜನ್ಮಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.
ಎಂಎಲ್‌ಸಿ ಎಸ್.ರುದ್ರೇಗೌಡ, ಫೌಂಡೇಷನ್‌ನ ಕಾರ್ಯಾಧ್ಯಕ್ಷ ಎಸ್.ದಯಾಶಂಕರ್, ಕಾಳೇನಹಳ್ಳಿ ಶ್ರೀ ಶಿವಯೋಗಾಶ್ರಮದ ಆಡಳಿತಾಧಿಕಾರಿ ಡಾ. ಜಿ.ಎ.ಹಿರೇಮಠ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕುಮಾರಚಲ್ಯ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.