ನ್ಯೂಸ್

ಪ್ರತೀಕಾರವಲ್ಲ ನ್ಯಾಯ; ಆಪರೇಷನ್ ಸಿಂಧೂರ ಕುರಿತ ಹೊಸ ವಿಡಿಯೋ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ‘ಆಪರೇಷನ್ ಸಿಂಧೂರ’ ಆರಂಭವಾಗಿದೆ. ಇದು ಕೋಪವಲ್ಲ, ಬದಲಿಗೆ ಭವಿಷ್ಯದಲ್ಲಿ ನೆನಪಿನಲ್ಲಿ ಉಳಿಯುವಂಥ ಪಾಠ ಕಲಿಸುವಂಥ ಸಂಕಲ್ಪ, ಇದು ಪ್ರತೀಕಾರವಲ್ಲ, ಇದು ನ್ಯಾಯ ಎಂದು ‘ಆಪರೇಷನ್ ಸಿಂಧೂರ’ ಕುರಿತು ಭಾರತೀಯ ಸೇನೆ ತಿಳಿಸಿದೆ.

‘ಆಪರೇಷನ್ ಸಿಂಧೂರ’ ಕುರಿತು ಸೇನೆಯ ವೆಸ್ಟರ್ನ್ ಕಮಾಂಡ್ ಎಕ್ಸ್ ಹ್ಯಾಂಡಲ್​ನಿಂದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಪಾಕ್ ಪ್ರದೇಶದಲ್ಲಿ ನಡೆದ ಸೇನಾ ಕಾರ್ಯಾಚರಣೆಯ ದೃಶ್ಯಗಳನ್ನು ಈ ವಿಡಿಯೋ ಒಳಗೊಂಡಿದೆ. ‘ಯೋಜಿತ, ತರಬೇತಾದ, ಕಾರ್ಯಗತಗೊಳಿಸಲಾದ..’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ಈ ವಿಡಿಯೋದಲ್ಲಿ, ಎಲ್ಲೆಲ್ಲಿಂದ ದಾಳಿ ಹೊಮ್ಮಿತ್ತೋ ಆ ಎಲ್ಲ ಪಾಕಿಸ್ತಾನಿ ಪೋಸ್ಟ್​ಗಳನ್ನು ಸದೆಬಡಿಯಲಾಗಿದೆ ಎಂದು ಸೈನಿಕರೊಬ್ಬರು ಹೇಳುವುದು ದಾಖಲಾಗಿದೆ.

ಇವೆಲ್ಲವೂ ಶುರುವಾಗಿದ್ದು ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ, ಕೋಪವು ಕರಗಿದ ಲಾವಾದಂತೆ ಇತ್ತು. ಆ ಸಮಯದಲ್ಲಿ ಮನಸಿನಲ್ಲಿ ಇದ್ದಿದ್ದು ಒಂದೇ ಯೋಚನೆ.. ‘ಈ ಸಲ ನಾವು ಅವರ ಹಲವು ಪೀಳಿಗೆಗಳು ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪಾಠ ಕಲಿಸುತ್ತೇವೆ’, ಇದು ಪ್ರತೀಕಾರವಲ್ಲ, ಇದು ನ್ಯಾಯ ಎಂದೂ ಸೈನಿಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

42ಕ್ಕೂ ಹೆಚ್ಚು ಶೆಲ್​ಗಳ ನಾಶ

ಜಮ್ಮು-ಕಾಶ್ಮೀರದ ಪೂಂಚ್​ಜಿಲ್ಲೆಯ ನಿಯಂತ್ರಣ ರೇಖೆ ಭಾಗದ ಗ್ರಾಮಗಳಲ್ಲಿ ಕಂಡುಬಂದಿರುವ ಸ್ಪೋಟಗೊಳ್ಳದ 42ಕ್ಕೂ ಅಧಿಕ ಶೆಲ್​ಗಳನ್ನು ನಾಶಪಡಿಸಿದ್ದಾಗಿ ಸೇನಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಗಡಿಭಾಗದ ಝುುಲ್ಲಾಸ್, ಸಲೋತ್ರಿ, ಧಾರತಿ, ಸಲಾನಿ ಪ್ರದೇಶಗಳಲ್ಲಿ ಈ ಶೆಲ್​ಗಳು ಕಂಡುಬಂದಿದ್ದವು. ಇವು ಇತ್ತೀಚೆಗೆ ನಡೆದ ಗಡಿಯಾಚೆಗಿನ ಶೆಲ್ ದಾಳಿಯ ಅವಶೇಷಗಳು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಕದನವಿರಾಮ ಮುಂದುವರಿಕೆ

ಭಾರತ-ಪಾಕಿಸ್ತಾನ ಕದನವಿರಾಮ ಮುಂದುವರಿಯಲಿದ್ದು, ಅದಕ್ಕೆ ಯಾವುದೇ ಎಕ್ಸ್​ಪೈರಿ ಡೇಟ್ ಇಲ್ಲ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ(ಡಿಜಿಎಂಒ)ರ ಮಧ್ಯೆ ಭಾನುವಾರ ಯಾವುದೇ ಸಭೆ ನಿಗದಿಯಾಗಿಲ್ಲ. ಭಾರತ-ಪಾಕ್ ಮೇ 12ರಂದು ಒಪ್ಪಿಕೊಂಡ ಕದನವಿರಾಮ ಮುಂದುವರಿಯಲಿದೆ ಎಂದು ಸೇನಾಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಭಾನುವಾರ ಡಿಜಿಎಂಒಗಳ ಮಧ್ಯೆ ಸಭೆ ನಡೆಯಲಿದೆ, ಕದನವಿರಾಮ ಅಂತ್ಯವಾಗಲಿದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯೆಯಾಗಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಭಾರತದ ನಡೆಯನ್ನೇ ನಕಲು ಮಾಡಿದ ಪಾಕ್!

ಪಾಕಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಕುರಿತು ಜಗತ್ತಿಗೆ ಮಾಹಿತಿ ನೀಡಲು ಹಾಗೂ ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರಲು ಕೇಂದ್ರ ಸರ್ಕಾರ ಏಳು ಸಂಸದರ ನಿಯೋಗವನ್ನು ರಚಿಸಿದೆ. ಅಲ್ಲದೇ ಈ ನಿಯೋಗದ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್​ಗೆ ವಹಿಸಿದ್ದಾರೆ. ಪಾಕ್ ಕೂಡ ಭಾರತದ ಈ ನಡೆಯನ್ನು ನಕಲು ಮಾಡಿದಂತಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದಲ್ಲಿ ವಿದೇಶಗಳಿಗೆ ನಿಯೋಗ ಕಳಿಸಲು ಪಾಕ್ ಮುಂದಾಗಿದೆ. ‘ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ವಾದವನ್ನು ಮಂಡಿಸುವ ನಿಯೋಗಗಳ ನೇತೃತ್ವವನ್ನು ವಹಿಸುವಂತೆ ಇಂದು ಬೆಳಗ್ಗೆ ಪ್ರಧಾನಿ ಷೆಹಬಾಜ್ ಷರೀಫ್ ಅವರು ನನ್ನನ್ನು ಸಂರ್ಪಸಿ ತಿಳಿಸಿದರು’ ಎಂಬುದಾಗಿ ಬಿಲಾವಲ್ ಭುಟ್ಟೋ ಹೇಳಿಕೊಂಡಿದ್ದಾರೆ.