ನ್ಯೂಸ್

ಕಿರಿಯ, ಹಿರಿಯ ಅಧಿಕಾರಿಗಳ ಹಂತದವರೆಗೂ ದೂರು, ನ್ಯಾಯ ಮಾತ್ರ ಸಿಕ್ಕಿಲ್ಲ

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಲೋಕಾಯುಕ್ತ ಸೇರಿದಂತೆ ಕಿರಿಯ ಅಧಿಕಾರಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ಹಂತದವರೆಗೂ ಮನವಿ ಸಲ್ಲಿಸಿದರೂ ಶೋಷಿತ ವರ್ಗದವರ ಜಮೀನಿನಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಸ್ಪಂದನೆ ಸಿಕ್ಕಿಲ್ಲ.

ಗೌರಿಬಿದನೂರಿನ ಮಾದವನಗರದ ವಿ.ಚಂದ್ರಕಲಾ ಮತ್ತು ಪದ್ಮ ಸಂಬಂಧಪಟ್ಟ ಪ್ರತಿಯೊಂದು ಸರ್ಕಾರಿ ಕಚೇರಿಗೂ ಹೋಗಿ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಸಲ್ಲಿಸಿದ ಮನವಿ ಪತ್ರಗಳಿಗೆ ಹಿಂಬರಹ ಮಾತ್ರ ಸಿಕ್ಕಿದೆ. ಆದರೆ, ನ್ಯಾಯ ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬದಲಿಗೆ ತಿಂಗಳಾನುಗಟ್ಟಲೇ ಅಲೆದಾಟಕ್ಕೆ ಸರ್ಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ನೆಪದಲ್ಲಿ ಅರ್ಜಿದಾರರ ವಿರುದ್ಧವೇ ದೂರು ಸಲ್ಲಿಕೆಯಾಗಿದೆ.

* ಮಹಿಳೆಯರ ದೂರು ಏನು?

ಗೌರಿಬಿದನೂರು ನಗರದಲ್ಲಿ ನೆಲೆಸಿರುವ ದೂರುದಾರರಾದ ಚಂದ್ರಕಲಾ ಮತ್ತು ಪದ್ಮ ಗುಡಿಬಂಡೆ ತಾಲೂಕಿನ ರ‍್ಲಕೊಂಡ ಗ್ರಾಮದ ಸರ್ವೆ ನಂಬರ್ 17/3 ರಲ್ಲಿನ 3 ಎಕರೆ 20 ಗುಂಟೆ ಜಮೀನು ಹೊಂದಿದ್ದಾರೆ. ಇದರ ನಡುವೆ ಪಕ್ಕದ ಜಮೀನಿನ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ಮತ್ತು ಕುರಿ ಶೆಡ್ಡು ನಿರ್ಮಿಸಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಲು ದಾಖಲೆ ಸಮೇತ ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟವರು ಪರಿಶೀಲಿಸಿ, ಸೂಕ್ತ ಕ್ರಮಕ್ಕೆ ಆದೇಶ ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

*ದೂರುಗಳ ಮಹಾಪೂರ

ಕಳೆದ ಎರಡು ವರ್ಷಗಳಿಂದಲೂ ದೂರುದಾರರು ಸಲ್ಲಿಸಿದ ಅರ್ಜಿಗಳಿಗೆ ಲೆಕ್ಕವೇ ಇಲ್ಲ. ಗ್ರಾ.ಪಂ, ತಾ.ಪಂ, ಜಿಲ್ಲಾಡಳಿತ, ಬೆಂಗಳೂರು ಲೋಕಾಯುಕ್ತ, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಕಚೇರಿಗಳಿಗೆ ತೆರಳಿ, ದಾಖಲೆಗಳನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಕೈಗೊಂಡಿದ್ದ ಜನಸ್ಪಂದನಗಳಲ್ಲೂ ಗಮನ ಸೆಳೆದಿದ್ದಾರೆ.

*ನಮ್ಮ ಜಮೀನಿನಲ್ಲಿ ಪ್ರಭಾವಿಗಳು ಮಾಡಿಕೊಂಡಿರುವ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿರುವುದು ಅಸಮಾಧಾನ ಮೂಡಿಸಿದೆ.

ಪದ್ಮ, ದೂರುದಾರರು,

*ನಿಯಮಾನುಸಾರ ಸಂಬಂಧಪಟ್ಟ ಅಧಿಕಾರಿಗಳು ದೂರಿಗೆ ಸ್ಪಂದಿಸಿದಾಗ ಕಚೇರಿಗೆ ಯಾರು ಪದೆಪದೇ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಿ ವರ್ಷಾನುಗಟ್ಟಲೇ ಸಲ್ಲಿಕೆಯಾದ ಅರ್ಜಿಯನ್ನು ಇತ್ಯರ್ಥಪಡಿಸಿಲ್ಲ. ಇದರಿಂದ ಕೆಲಸ ಕಾರ್ಯಗಳನ್ನು ಬಿಟ್ಟು ಓಡಾಡಿ, ಹೈರಾಣಾಗುತ್ತಿದ್ದು ಇದರ ಬಗ್ಗೆ ಅಳಲು ತೋಡಿಕೊಳ್ಳುವುದೇ ಅಧಿಕಾರಿಗಳಿಗೆ ದೊಡ್ಡ ತಪ್ಪಾಗಿದೆ.

ಶಶಿಕಲಾ, ದೂರುದಾರರು,