ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ನುರುಪಾಗೆ ಚಿನ್ನ, ಪುಷ್ಪಕ್ಗೆ ರಜತ
ಬೆಂಗಳೂರು: ಕರ್ನಾಟಕದ ನುರುಪಾ ಹೊಳ್ಳ ಮತ್ತು ಪುಷ್ಪಕ್ ನೆಲವಾಡೆ ಪಂಜಾಬ್ನ ಲುಧಿಯಾನಾದಲ್ಲಿ ಗುರುವಾರ ಮುಕ್ತಾಯಗೊಂಡ 21ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ (National Youth Athletics Championship) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಕೂಟದ 3ನೇ ಮತ್ತು ಕೊನೇ ದಿನ ನಡೆದ ಬಾಲಕಿಯರ 100 ಮೀ. ಹರ್ಡಲ್ಸ್ನಲ್ಲಿ ನುರುಪಾ ಹೊಳ್ಳ 13.78 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದರು. ತಮಿಳುನಾಡಿನ ರಾಜಶ್ರೀ ವಿ.ಬಿ. 14.23 ಸೆಕೆಂಡ್ಗಳಲ್ಲಿ ಓಡಿ ಬೆಳ್ಳಿ ಜಯಿಸಿದರೆ, ಉತ್ತರ ಪ್ರದೇಶದ ಖುಷಿ ಪಟೇಲ್ 14.42 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿಗೆ ತೃಪ್ತಿಪಟ್ಟರು.
ಪುಷ್ಪಕ್ ನೆಲವಾಡೆ ಬಾಲಕರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 76.09 ಮೀ. ಎಸೆತದೊಂದಿಗೆ ರಜತ ಪದಕಕ್ಕೆ ಕೊರಳೊಡ್ಡಿದರು. ಮಧ್ಯಪ್ರದೇಶದ ಕ್ರಿಷನ್ ಚಂದ್ರ 79.92 ಮೀ. ದೂರ ಎಸೆದು ಚಿನ್ನ ಗೆದ್ದರೆ, ರಾಜಸ್ಥಾನದ ಮಂಜೀತ್ ಕುಮಾರ್ 74.45 ಮೀ. ಎಸೆತದೊಂದಿಗೆ ಕಂಚು ಗಳಿಸಿದರು.