ನ್ಯೂಸ್

ಜಡ್ಜ್‌ಗಳು ಮೊಘಲರಂತೆ ವರ್ತಿಸುವಂತಿಲ್ಲ : ಗುತ್ತಿಗೆ ವಿಸ್ತರಣೆಗೆ ಹೈಕೋರ್ಟ್ ನಕಾರ

ಬೆಂಗಳೂರು: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸುವಂತಿಲ್ಲ ಎಂದಿರುವ ಹೈಕೋರ್ಟ್, ಕಾನೂನು ಅಡಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ 20 ವರ್ಷ ವಿಸ್ತರಿಸಲು ನಿರ್ಧರಿಸಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟು ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದೆ.

ಅಂಗವಿಕಲರೊಬ್ಬರಿಗೆ ನೀಡಿದ್ದ ಗುತ್ತಿಗೆಯನ್ನು ವಿಸ್ತರಿಸಲು ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚನ್ನಪಟ್ಟಣದ ನಗರಸಭೆ (ಸಿಟಿ ಮುನ್ಸಿಪಲ್ ಕೌನ್ಸಿಲ್) ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಾದ ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ಗುತ್ತಿಗೆಯನ್ನು ಸಿದ್ದರಾಮು ಎಂಬುವವರಿಗೆ ವಿಕಚೇತನರ ಕಾಯ್ದೆಯಡಿ ಅಸಾಮರ್ಥ್ಯದ ನಿರ್ದಿಷ್ಟ ಆಧಾರದ ಮೇಲೆ ನೀಡಿರುವುದನ್ನು ಗಮನಿಸಿತು.

ಅಲ್ಲದೆ, ಈ ಕುರಿತಾಗಿ 2009ರ ಅ.26ರಂದು ಸರ್ಕಾರ ಹೊರಡಿಸಿದ ಸುತ್ತೋಲೆ ಉಲ್ಲೇಖಿಸಿ ಗುತ್ತಿಗೆಯನ್ನು ಗರಿಷ್ಠ ಅವಧಿ 12 ವರ್ಷಕ್ಕೆ ಮಾತ್ರ ನವೀಕರಿಸಲು ಅವಕಾಶವಿದೆ. ಈ ರೀತಿಯ ಹಂಚಿಕೆಯನ್ನು ಅನುವಂಶಿಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ.

ಹಾಗಾಗಿ ಪತ್ನಿ ಹಾಗೂ ಮಕ್ಕಳು ಏನನ್ನೂ ಪಡೆಯುವುದಿಲ್ಲ. ಅಷ್ಟೇ ಅಲ್ಲದೆ, 2017ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ನಿಯಮಗಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಅವಲಂಬಿಸಿರುವವರು ಆತ ಕೊನೆಯುಸಿರೆಳೆದ ನಂತರ ಅವರನ್ನು ರಕ್ಷಿಸುವ ಉದ್ದೇಶ ಹೊಂದಿಲ್ಲ ಎನ್ನುವುದನ್ನು ಪೀಠ ತಿಳಿಸಿದೆ.

ಅಲ್ಲದೆ ನ್ಯಾಯಧೀಶರು ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಆದೇಶ ನೀಡಬೇಕಾಗುತ್ತದೆ. ನ್ಯಾಯ ಒದಗಿಸುವ ನೆಪದಲ್ಲಿ ಕಾನೂನು ಮೀರಿ ಕಾರ್ಯಚರಿಸಲು ಅಧಿಕಾರವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.