ನವದೆಹಲಿ: ಸ್ವರಕ್ಷಣೆಗಾಗಿ ಮಾತನಾಡುವುದರಿಂದ ತಮ್ಮನ್ನು ತಾವು ತಡೆಯುವ ಕಾರಣ ಜಡ್ಜ್ಗಳು ಸೋಷಿಯಲ್ ಮೀಡಿಯಾಗಳಲ್ಲಿ ಜ್ಯೂಸಿ ಗಾಸಿಪ್, ಅಪಪ್ರಚಾರಗಳ ಸಂತ್ರಸ್ತರಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದ್ದಾರೆ. ಭಾವಿ ಮುಖ್ಯನ್ಯಾಯಮೂರ್ತಿಗಳೆನ್ನುವ ಕಾರಣಕ್ಕೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್. ಬಾನುಮತಿ ಬರೆದ ಜುಡಿಷಿಯರಿ, ಜಡ್ಜ್ ಆ್ಯಂಡ್ ದ ಅಡ್ಮನಿಷ್ಟ್ರೇಶನ್ ಆಫ್ ಜಸ್ಟೀಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಜಡ್ಜ್ಗಳ ಬದುಕು ಎನ್ನುವುದು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಅವರು ದಂತದ ಮಹಲಿನಲ್ಲಿ ಐಷಾರಾಮಿ ಬದುಕನ್ನೇನೂ ಸಾಗಿಸುತ್ತಿಲ್ಲ. ಹಾಗೊಂದು ತಪ್ಪು ತಿಳಿವಳಿಕೆ ಇರುವವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ರಮಣ ಅವರು ಅಭಿಪ್ರಾಯಪಟ್ಟರು.
ಇದೇ ಕಾರ್ಯಕ್ರಮದಲ್ಲಿ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಕೂಡ ಭಾಗಿಯಾಗಿದ್ದು, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ತದ್ವಿರುದ್ಧವಾಗಿ ತಮಗೆ ಬೇಕಾದಂತೆ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಜನಸಾಮಾನ್ಯರನ್ನು ಯಾವ ಕಾನೂನು ತಡೆಯುತ್ತದೆಯೋ ಅದೇ ಕಾನೂನು ಜಡ್ಜ್ಗಳ ವಾಕ್ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಿದೆ ಎಂದು ಹೇಳಿದರು.
ಅವರಿಬ್ಬರ ಈ ಹೇಳಿಕೆಯು, ಆ್ಯಕ್ಟಿವಿಸ್ಟ್ -ಲಾಯರ್ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)