ನ್ಯೂಸ್

ನ್ಯಾಯಾಧೀಶರು ಕೂಡ ರಜೆ ನಗದೀಕರಣಕ್ಕೆ ಅರ್ಹರು : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು:ನ್ಯಾಯಾಧೀಶರು ಸಹ ರಜೆ ನಗದೀಕರಣಕ್ಕೆ ಅರ್ಹರು ಎಂದಿರುವ ನ್ಯಾಯಪೀಠ, ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಆಗುತ್ತಿದ್ದಂತೆ ರೈಲ್ವೇ ಕ್ಲೈಮ್ ನ್ಯಾಯಾಧೀಕರಣದ ಮುಖ್ಯಸ್ಥರಾಗಿ ನೇಮಕಗೊಂಡು ಎರಡು ವರ್ಷ ಎಂಟು ತಿಂಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಗಳಿಕೆ ರಜೆಯ ರಜಾ ನಗದೀಕರಣವನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಅರ್ಜಿದಾರರಿಗೆ ಹಣ ಪಾವತಿಸುವಂತೆ ರೈಲ್ವೇ ಮಂಡಳಿಗೆ ಸೂಚಿಸಿದೆ.

ಪ್ರಕರಣ ಸಂಬಂಧ ನ್ಯಾಯಮೂರ್ತಿ ಬಿ.ಪದ್ಮರಾಜ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗ್ದಮ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ನ್ಯಾಯಮೂರ್ತಿ ಬಿ.ಪದ್ಮರಾಜ್ ರೈಲ್ವೇ ಕ್ಲೇಮು ನ್ಯಾಯಾಧೀಕರಣ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರ ಅವಧಿ ಮುಗಿದ ಬಳಿಕ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ರಜೆ ನಗದೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಮನವಿಯನ್ನು ಕೇಂದ್ರೀಯ ರೈಲ್ವೇ ಮಂಡಳಿ ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ರಜೆ ನಗದೀಕರಣ ಮಾಡಲು ರೈಲ್ವೆ ಮಂಡಳಿಗೆ ಸೂಚಿಸಲು ಕೋರಿದ್ದರು. ಆ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಾಧೀಶರು ಸಹ ರಜೆ ನಗದೀಕರಣಕ್ಕೆ ಅರ್ಹರಾಗಿದ್ದಾರೆ. ಹಾಗಾಗಿ ಅರ್ಜಿದಾರರಿಗೆ ಹಣ ಪಾವತಿಸುವಂತೆ ರೈಲ್ವೇ ಮಂಡಳಿಗೆ ಸೂಚಿಸಿದೆ. ಅದರೆ, ವಾರ್ಷಿಕವಾಗಿ ನಿಗದಿಪಡಿಸಲಾಗಿರುವ ಗರಿಷ್ಠ ಪಿಂಚಣಿ ಮೊತ್ತಕ್ಕಿಂತ  ಹೆಚ್ಚು ಪಿಂಚಣಿ ನೀಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೇ ಪಿಂಚಣಿಯು ನಿಗದಿತ ಮಿತಿಯನ್ನು ದಾಟಿದ್ದರೆ ಆ ಬಳಿಕ ಹೆಚ್ಚುವರಿ ಪಿಂಚಣಿ ಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ರೈಲ್ವೇ ನ್ಯಾಯಾಧೀಕರಣದ ಮುಖ್ಯಸ್ಥರಾಗಿ ಪಿಂಚಣಿ ನೀಡಬೇಕು ಎಂಬ ಅರ್ಜಿದಾರರ ವಾದ ಅಸಿಂಧುವಾಗಿದೆ. ಹಾಗೆಯೇ ಪಿಂಚಣಿಯ ನಿಯಮಗಳ ಪಾಲನೆ ಆಗಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ ರೈಲ್ವೇ ನ್ಯಾಯಾಧೀಕರಣದ ಮುಖ್ಯಸ್ಥರಾಗಿ ವಾರ್ಷಿಕವಾಗಿ 15 ಗಳಿಕೆ ರಜೆ ಪಡೆಯುವ ಅವಕಾಶವಿದ್ದು ಅದರ ನಗದೀಕರಣದ ಬೇಡಿಕೆ ನ್ಯಾಯಬದ್ಧವಾಗಿದೆ. ಇದಕ್ಕೂ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪಡೆದಿರುವ ರಜಾ ನಗದೀಕರಣಕ್ಕೂ ಸಂಬಂಧ ಕಲ್ಪಿಸಲಾಗದು. ಆದ್ದರಿಂದ ಅರ್ಜಿದಾರರಿಗೆ ಬಾಕಿ ಇರುವ ರಜಾ ನಗದೀಕರಣ ಮಾಡಬೇಕು ಎಂದು ಪ್ರತಿವಾದಿಗಳಿಗೆ ನ್ಯಾಾಯಾಲಯ ನಿರ್ದೇಶನ ನೀಡಿದೆ.