ಶಿವಮೊಗ್ಗ: ಜೀತ ಪದ್ಧತಿ ಎಂಬುದು ಅಮಾನವೀಯ, ಹೀನಾಯ ವ್ಯವಸ್ಥೆ. ಅದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮುಕ್ತಿ ಅಲಯನ್ಸ್ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗಿ ಜಾಗತಿಕ ಮಟ್ಟದಲ್ಲಿ ಅನೇಕ ರೀತಿ ಸಾಧನೆ ಮಾಡುತ್ತಿದ್ದರೂ ಅಮಾನವೀಯ ಜೀತ ಪದ್ಧತಿಯಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ಜೀತಪದ್ಧತಿ ನಮ್ಮಲ್ಲಿ ಇನ್ನೂ ಇದೆ ಎಂದು ಹೇಳಿಕೊಳ್ಳಲು ಅವಮಾನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೊಳಿಸಲು ಕಾನೂನು ಜಾರಿಯಲ್ಲಿದೆ. ಇದನ್ನು ನಾವು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಇನ್ನೂ ಜೀತ ಪದ್ಧತಿ ಕೊನೆಗೊಳ್ಳದಿರುವುದಕ್ಕೆ ಕಾರಣ ಹುಡುಕಬೇಕಿದೆ ಎಂದರು.
ಬಡವರು ಈ ಪದ್ಧತಿ ಬಲಿಪಶುಗಳಾಗುತ್ತಿರುವುದನ್ನು ಕಾಣಬಹುದು. ತಂದೆ ಪಡೆದ ಸಾಲ ತೀರಿಸಲಾರದೆ ವಂಶಪಾರಂಪರ್ಯವಾಗಿ ಜೀತ ವ್ಯವಸ್ಥೆಗೆ ಬಲಿಯಾದವರಿದ್ದಾರೆ. ಇವರಿಗೆ ಶೈಕ್ಷಣಿಕ, ಸಾಮಾಜಿಕವಾಗಿ ಸ್ಥಾನಮಾನ, ಸ್ವಾತಂತ್ರೃವಿರುವುದಿಲ್ಲ. ರಾಜ್ಯದ ಜನ ಇತರ ರಾಜ್ಯಗಳಿಗೆ ಹಾಗೂ ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ಜೀತ ಮಾಡುತ್ತಿರುವುದನ್ನೂ ಕಾಣಬಹುದು ಎಂದು ಹೇಳಿದರು.
ಇತ್ತೀಚೆಗೆ ಕಾರ್ಖಾನೆ, ಹೋಟೆಲ್, ಕಾಫಿ ಎಸ್ಟೇಟ್‌ಗಳ ರೂಪದಲ್ಲಿ ಆಧುನಿಕ ಜೀತ ಪದ್ಧತಿ ಕಾಣುತ್ತಿದ್ದೇವೆ. ಆದರೆ ದಾಳಿಗೆ ತೆರಳಿದ ಸಂದರ್ಭದಲ್ಲಿ ದಿನಗೂಲಿ ಎನ್ನುತ್ತಾರೆ. ಇದನ್ನು ಕಂಡು ಹಿಡಿಯುವುದು ಕಷ್ಟವಾದರೂ ಅನಿವಾರ್ಯವಾಗಲಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಮುಕ್ತಿ ಅಲಯನ್ಸ್ ಕರ್ನಾಟಕದ ಸಂಚಾಲಕಿ ಬೃಂದಾ ಅಡಿಗ, ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಮುಕ್ತಿ ಅಲಯನ್ಸ್ ಕರ್ನಾಟಕ ಸಂಸ್ಥೆ ಸದಸ್ಯರಾದ ರಾಜೇಂದ್ರ, ಸ್ಟಾೃನ್ಲಿ, ಎಂಎಡಿಬಿ ಅಧೀನ ಕಾರ್ಯದರ್ಶಿ ಹನುಮಾ ನಾಯ್ಕ ಇತರರಿದ್ದರು.