ನ್ಯೂಸ್

ಜ್ಯೋತಿರ್ಲಿಂಗ: ‘ಕಂಡೆನೆಂಬ ಬಂಜೆಯ ಮಕ್ಕಳು’

lakshmihegde

ಖಂಡಿತವಿಲ್ಲದ ಅಖಂಡಿತನೆ

ನಿಮ್ಮ ಕಂಡವರುಂಟೆ, ಹೇಳಯ್ಯ?

ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು!

ನೀ ನಿಂದ ಹೆಜ್ಜೆಯ ಕೆಳಗೆ

ಬಂದು ಬಂದು ಹುಟ್ಟಿ ಬೆಳಗುವ ಚೆಂದವ ಕಂಡು

ಕಣ್ದೆರೆದೆ ಕಾಣಾ, ರಾಮನಾಥ.

ತನ್ನ ಇಷ್ಟದೈವ ರಾಮನಾಥನ ಸಂಬೋಧನೆಯಲ್ಲಿರುವ ಜೇಡರ ದಾಸಿಮಯ್ಯನ ಈ ವಚನ ರಾಮನಾಥನ ಕುರಿತಾಗಿಯೇ ಮಂಡನೆಯೊಂದನ್ನು ಮುಂದಿಡುತ್ತಿದೆ. ಈ ಮಂಡನೆ ಮುಖ್ಯವಾಗಿ ರಾಮನಾಥನನ್ನು ಕುರಿತ ತಿಳಿವಳಿಕೆಗೆ ಸಂಬಂಧಿಸಿದ ತಿದ್ದುಪಡಿಯಾಗಿದೆ. ಈ ದೃಷ್ಟಿಯಿಂದ ವಚನ ಇನ್ನೊಂದು ಕಡೆಯಲ್ಲಿ ರಾಮನಾಥನನ್ನು ತಿಳಿದೆನೆಂಬವರನ್ನೂ ಸಂಬೋಧಿಸುತ್ತಿದೆ. ತಿಳಿವಳಿಕೆ ಹಾಗೂ ತಿಳಿದವರ ನಡುವಿನ ಸಂಬಂಧ ಇಲ್ಲಿ ಮುನ್ನೆಲೆಗೆ ಬರುತ್ತಿದೆ. ರಾಮನಾಥನನ್ನು ತಿಳಿದೆನೆನ್ನುವವರು ಇಲ್ಲಿ ಆತನನ್ನು ಕಂಡೆವೆಂದು ಹೇಳುವವರಾಗಿದ್ದಾರೆ. ಸಾಮಾನ್ಯವಾದ ಗ್ರಹಿಕೆಯಲ್ಲಿ ತಿಳಿಯುವಿಕೆಯೆನ್ನುವುದು ಕಾಣುವಿಕೆಯೊಂದಿಗೆ ಒಂದಾಗಿದೆ. ಆದರೆ ಈ ಕಾಣುವಿಕೆಗೆ ಸಂಬಂಧಿಸಿದಂತೆಯೇ ವಚನದ ಮೂಲಭೂತವಾದ ವಿರೋಧವಿದೆ. ಈ ವಿರೋಧವನ್ನು ಅದು ಸ್ವತಃ ರಾಮನಾಥನನ್ನೇ ಸಾಕ್ಷಿಯನ್ನಾಗಿ ಮಾಡಿಕೊಂಡು ದಾಖಲಿಸುತ್ತದೆ. ಇದು ವಚನದ ಮಂಡನೆಯ ಹಿಂದಿರುವ ರ್ತಾಕ ವಿನ್ಯಾಸವೂ ಆಗಿದೆ.

ವಚನವು ರಾಮನಾಥನನ್ನು ‘ಖಂಡಿತವಿಲ್ಲದ ಅಖಂಡಿತನೆ’ ಎಂದು ಸಂಬೋಧಿಸುತ್ತದೆ. ‘ಖಂಡಿತ’ವೆಂದರೆ ವಿಭಜನೆಗೊಂಡದ್ದು. ಅದಕ್ಕೆ ಒಂದು ಮೊದಲೂ ಇದೆ, ಕೊನೆಯೂ ಇದೆ. ಆದರೆ ‘ಅಖಂಡಿತ’ವೆನ್ನುವುದು ವಿಭಜನೆಗೆ ಹೊರತಾದುದು. ಅದಕ್ಕೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಇಲ್ಲಿನ ಸಂಬೋಧನೆಯಲ್ಲಿ ನಾಮಪದವೂ ಗುಣವಾಚಕವೂ ಒಂದೇ ಆಗಿದೆ. ನಾಮಪದವನ್ನೇ ಗುಣವಾಚಕವು ಇನ್ನೊಂದು ರೀತಿಯಲ್ಲಿ ಮುಂದಿಡುತ್ತಿದೆ. ಹಾಗೆ ನೋಡಿದರೆ ಇದು ಸಂಬೋಧನೆಯಲ್ಲಿ ಒಂದು ನಿರ್ಣಯವನ್ನು ಮಂಡಿಸುವ ವಿಧಾನವೂ ಆಗಿದೆ. ‘ಕಾಣುವುದಕ್ಕೆ’ ವಿರೋಧವನ್ನು ಇಲ್ಲಿ ಹೀಗೆ ಸಿದ್ಧಪಡಿಸಲಾಗುತ್ತಿದೆ. ‘ಕಾಣುವುದು’ ದೇಶದಲ್ಲಿ ಮತ್ತು ಕಾಲದಲ್ಲಿ ಸಂಭವಿಸುವಂಥದಾಗಿದೆ. ಹೀಗಾಗಿ ಇಲ್ಲಿ ಕಾಣುವಿಕೆಗೆ ಮೊದಲೂ ಇದೆ, ಕೊನೆಯೂ ಇದೆ. ಕಾಣುವುದೆಂಬ ಕ್ರಿಯೆಯೇ ದೃಶ್ಯವನ್ನು ಒಂದು ಚೌಕಟ್ಟಿನಲ್ಲಿ ಬಂಧಿಸುವಂಥದಾಗಿದೆ. ಅಥವಾ ಅಖಂಡಿತವಾದುದನ್ನು ದೃಶ್ಯವೆಂದು ಪರಿಭಾವಿಸುವುದಕ್ಕೇ ಇಲ್ಲಿ ಮೂಲಭೂತವಾದ ವಿರೋಧವಿದೆ. ಈ ವಿರೋಧವನ್ನು ವಚನವು ಇನ್ನೊಂದು ರೀತಿಯಲ್ಲಿ ಮಂಡಿಸುತ್ತಿದೆ. ಇಲ್ಲಿ ದರ್ಶಕರಿಗೂ ದೃಶ್ಯಕ್ಕೂ ವಿರೋಧವಿದೆ. ತಾವು ದರ್ಶಕರಾದೆವೆನ್ನುವುದೇ ಅದಕ್ಕೆ ವಿರುದ್ಧವಾದುದನ್ನು ಸಾಬೀತುಪಡಿಸುವಂಥದಾಗಿದೆ. ಇದನ್ನು ವಚನ ಇನ್ನೊಂದು ವಿರೋಧದ ಮೂಲಕವೇ ವಿವರಿಸುತ್ತಿದೆ. ‘ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು!’ ಎಂಬ ಮಾತು ಇಲ್ಲಿದೆ. ಇಲ್ಲಿ ನಾಮಪದವೂ ಗುಣವಾಚಕವೂ ವಿರೋಧವೊಂದರಲ್ಲಿ ಒಗ್ಗೂಡಿವೆ. ಒಂದು ನಿಜವಾಗಿದ್ದರೆ ಇನ್ನೊಂದು ನಿಜವಾಗದ ಸನ್ನಿವೇಶ ಇಲ್ಲಿದೆ. ರಾಮನಾಥನನ್ನು ಕುರಿತ ವಿವರಣೆಯಲ್ಲಿ ಗುಣವಾಚಕವು ನಾಮಪದದ ಪುನರುಕ್ತಿಯಾಗಿದೆ. ಹಾಗಾಗಿ ಒಂದು ಇನ್ನೊಂದರ ಅರ್ಥಭಾರವನ್ನು ಹೆಚ್ಚಿಸುತ್ತಿದೆ. ಆದರೆ ಇಲ್ಲಿ ಒಂದು ಇನ್ನೊಂದರ ಅರ್ಥವನ್ನು ನಿರಾಕರಿಸುತ್ತಿದೆ. ಈ ನಿರಾಕರಣೆಯಲ್ಲೇ ವಚನದ ಮಂಡನೆಯ ಸ್ವರೂಪವಿದೆ. ‘ಅಖಂಡಿತ’ನನ್ನು ‘ಕಾಣುವುದೆಂ’ಬ ಮಾತಿನಲ್ಲಿ ದೃಶ್ಯವೂ ಇದೆ, ಕ್ರಿಯೆಯೂ ಇದೆ. ಆದರೆ ಈ ದೃಶ್ಯ-ಕ್ರಿಯೆಗಳೇ ಪರಸ್ಪರ ವಿರೋಧದಲ್ಲಿವೆ. ಹೀಗೆ ಕ್ರಿಯೆಯನ್ನು ದೃಶ್ಯಕ್ಕೆ ವಿರೋಧವಾಗಿಸುವುದರ ಮೂಲಕ ವಚನವು ಒಂದು ಮುಖ್ಯ ಸಂಗತಿಯತ್ತ ನಮ್ಮನ್ನು ಕರೆದೊಯ್ಯುತ್ತಿದೆ. ಅಖಂಡಿತವಾದುದನ್ನು ಕಾಣುವೆನೆನ್ನುವುದರಲ್ಲಿಯೇ ವಚನವು ವಿರೋಧವನ್ನು ಕಾಣುತ್ತದೆ. ಏಕೆಂದರೆ ತನ್ನನ್ನು ತಾನು ‘ಖಂಡಿತ’ವಾಗಿಸಿಕೊಂಡಲ್ಲದೆ ಮತ್ತೇನನ್ನೂ ಕಾಣಲು ಬರುವುದಿಲ್ಲ ಎಂಬ ದನಿ ಇಲ್ಲಿದೆ. ಖಂಡಿತವಾಗಿಸಿಕೊಳ್ಳುವುದೆಂದರೆ ಅಸ್ತಿತ್ವದಿಂದ ದೂರವಾಗುವುದು. ಹೀಗೆ ತನ್ನನ್ನು ಸೀಮಿತಗೊಳಿಸಿಕೊಂಡಾಗ ಕ್ರಿಯೆಯೂ ಸೀಮಿತವಾಗುವುದಲ್ಲದೆ ದೃಶ್ಯವೂ ಸೀಮಿತವಾಗುತ್ತದೆ.

ಈ ಸೀಮಿತವನ್ನು ದಾಟುವ ತುಡಿತ ವಚನದಲ್ಲಿದೆ.

ಮುಂದಿನ ಮಾತು ವಚನದ ಶಿಖರವಾಗಿದೆ. ‘ನೀ ನಿಂದ ಹೆಜ್ಜೆಯ ಕೆಳಗೆ ಬಂದು ಬಂದು ಹುಟ್ಟಿ ಬೆಳಗುವ ಚೆಂದವ ಕಂಡು ಕಣ್ದೆರೆದೆ ಕಾಣಾ, ರಾಮನಾಥ.’ ಯಾವುದು ಕಾಣಲೆತ್ನಿಸುತ್ತಿರುವುದೋ ಅದೇ ಇಲ್ಲಿ ದೃಶ್ಯದ ಭಾಗವೂ ಆಗಿದೆ. ‘ಬಂದು ಬಂದು’ ಎಂಬ ಪುನರುಕ್ತಿ ಇಲ್ಲಿ ಕ್ರಿಯೆಯನ್ನು ನಿರಂತರವಾಗಿಸುತ್ತ ಅದನ್ನೂ ಅಖಂಡಿತವನ್ನಾಗಿಸಿದೆ. ಹೀಗೆ ಅಖಂಡಿತವಾಗಿರುವುದರಲ್ಲಿಯೇ ಇಲ್ಲಿ ಬೆಳಗೂ ಇದೆ, ಚೆಲುವೂ ಇದೆ. ಈ ಎಲ್ಲ ಸೃಷ್ಟಿ ‘ನೀ ನಿಂದ ಹೆಜ್ಜೆಯ ಕೆಳಗೆ’ ಸಂಭವಿಸುತ್ತಿದೆ. ಹೀಗಾಗಿ ಇಲ್ಲಿ ಅಸ್ತಿತ್ವದಲ್ಲಿಯೇ ಶರಣಾಗತಿ ಅಂತರ್ಗತವಾಗಿದೆ. ಇಲ್ಲಿ ಎಲ್ಲವೂ ‘ಆಗುವಿಕೆ’ಯೆಂಬ ಅಸ್ತಿತ್ವವಾಗಿರುವುದರಿಂದ ಅದರ ಹೊರತಾಗಿ ‘ಕಾಣುವಿಕೆ’ಯೆಂಬ ಕ್ರಿಯೆಗೆ ತೆರಹಿಲ್ಲದಂತಾಗಿದೆ. ‘ಕಾಣುವಿಕೆ’ಯಿಂದ ಈ ‘ಆಗುವಿಕೆ’ಗೆ ಮರಳುವುದರಲ್ಲೇ ‘ಕಣ್ದೆರೆಯುವಿಕೆ’ ಎಂಬುದೊಂದಿದೆ. ಕಣ್ದೆರೆಯುವುದೆಂದರೆ ತಾನು ಈ ಮೊದಲು ಕಂಡದ್ದರ ಸೀಮಿತತೆಯನ್ನು ಮನಗಂಡು ಆಗುವಿಕೆಯ ಅನಂತತೆಯಲ್ಲಿ ಜೀವಂತಿಕೆಯನ್ನು ಗುರುತಿಸುವುದಾಗಿದೆ.

ಇಂದು ನಾವು ನಮ್ಮೆಲ್ಲ ತಿಳಿವಿನ ವೈಧಾನಿಕತೆಯನ್ನು ಕೇವಲ ಕಾಣುವಿಕೆಯೊಂದಿಗೆ ಸಮೀಕರಿಸಿಕೊಂಡಿದ್ದೇವೆ. ಆದರೆ ಇದರಿಂದ ಆಗುವಿಕೆಗೆ ದೂರವಾಗುತ್ತಿದ್ದೇವೆಯೇ? ವಚನದ ಬೆಳಕಿನಲ್ಲಿ ಕಣ್ದೆರೆಯಬೇಕಾಗಿದೆಯೆಂದು ತೋರುತ್ತದೆ.