ನ್ಯೂಸ್

ಪತ್ರಕರ್ತನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂತು ಆರೋಪಿಗಳ ಸಂಚು

ಲಖನೌ: ಹಾಡಹಗಲೇ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.

ಮೃತರನ್ನು ರಾಘವೇಂದ್ರ ಭಾಜಪೈ ಎಂದು ಗುರುತಿಸಲಾಗಿದ್ದು, ಇವರು ಹಿಂದಿ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸೀತಾಪುರದ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧೀಕಾರಿಯೊಬ್ಬರು, ದುಷ್ಕರ್ಮಿಗಳು ಮೊದಲಿಗೆ ಭಾಜ್​ಪೈ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮೊದಲಿಗೆ ಇದು ಅಪಘಾತವೆಂಬಂತೆ ಕಂಡು ಬಂದಿತ್ತು. ಆ ನಂತರ ಮೃತದೇಹವನ್ನು ಪರಿಶೀಲಿಸಿದಾಗ ಗುಂಡು ಹಾರಿಸಿರುವ ಗುರುತ್ತುಗಳು ಪತ್ತೆಯಾಗಿದ್ದು, ಬಳಿಕ ಇದು ಕೊಲೆ ಏಂದು ತಿಳಿದು ಬಂದಿದೆ.

ಮೃತರ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಮೂರು ತಂಡಗಳನ್ನು ರಚಿಸಲಾಗಿದೆ. ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.