ಕಳೆದ ವರ್ಷ "ಜೊತೆಯಾಗಿ ಹಿತವಾಗಿ' ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಯುವನಟ ಅಗಸ್ತ್ಯ, ಇದೀಗ ಮತ್ತೊಂದು ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಹೆಸರು ರಿವೀಲ್ ಮಾಡಲಾಗಿದ್ದು "ಡಿಂಚಕ್ ಡಿಂಚಕ್' ಎಂದು ನಾಮಕರಣ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಜೆನ್ಜೀ ಮತ್ತು ಜೆನ್ ಆಲ್ಫಾಗಳನ್ನು ಗುರಿಯಾಗಿಸಿಕೊಂಡು ಬರುತ್ತಿರುವ ಕಥೆಗಳು ಹೆಚ್ಚು ಯಶಸ್ಸು ಕಾಣುತ್ತಿವೆ. ಹೀಗಾಗಿಯೇ ಆ ಅಲೆಯನ್ನು ಸದುಪಯೋಗಪಡಿಸಿಕೊಳ್ಳಲು ಇದೀಗ "ಡಿಂಚಕ್ ಡಿಂಚಕ್' ಟೀಂ ಮುಂದಾಗಿದೆ. ಹದಿಹರೆಯದ ಮನಸ್ಸುಗಳು ಮತ್ತು ಕೌಟುಂಬಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಮಾಡಿಕೊಳ್ಳಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಾಯಕನಾಗಿ ನಟಿಸುವುದರ ಜತೆಜತೆಗೇ ಖುದ್ದು ಅಗಸ್ತ್ಯ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವುದು ವಿಶೇಷ. ನಾಯಕಿ ಸೇರಿ ಉಳಿದ ತಾರಾಗಣದ ಬಗ್ಗೆ ಇನ್ನಷ್ಟೇ ಚಿತ್ರತಂಡ ಮಾಹಿತಿ ನೀಡಲಿದೆ. ಆನಂದ್ ರಾಜ ವಿಕ್ರಮ್ ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.