ಬೆಂಗಳೂರು: ಲೋಕಾಯುಕ್ತ ಪೊಲೀಸರ ಹೆಸರಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚಿಸಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿಗೆ ಹೊಸದಾಗಿ ನೋಟಿಸ್ ಜಾರಿಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೊರ್ಟ್ ಸೂಚನೆ ನೀಡಿದೆ.
ಲೋಕಾಯುಕ್ತ ಪೊಲೀಸರು ನೀಡಿದ್ದ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ಶ್ರೀನಾಥ್ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ಈ ಸೂಚನೆ ನೀಡಿದೆ. ಪ್ರಕರಣದ ತನಿಖೆಗೆ ಹಾಜರಾಗಲು ಸೂಚಿಸಿ ಲೋಕಾಯುಕ್ತ ಪೊಲೀಸರು ಅರ್ಜಿದಾರರಿಗೆ ಜೂ.15ರಂದು ನೋಟಿಸ್ ಜಾರಿಗೊಳಿಸಿದ್ದರು. ಒಂದು ದಿನದಲ್ಲಿ (ಜೂ.16ರ ಒಳಗೆ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಆದರೆ, ವಿಚಾರಣೆಗೆ ಹಾಜರಾಗಲು ನಿಗದಿಪಡಿಸಿದ್ದ ಸಮಯ ಮುಗಿದಿದೆ. ಇದರಿಂದ ಲೋಕಾಯುಕ್ತ ಪೊಲೀಸರು ಹೊಸದಾಗಿ ಜೋಶಿಗೆ ನೋಟಿಸ್ ಜಾರಿ ಮಾಡಬೇಕು. ನೋಟಿಸ್ ನೀಡಿದ ನಂತರ 10 ದಿನದಲ್ಲಿ ಜೋಶಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಜೋಶಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ನ್ಯಾಯಪೀಠ ಸೂಚಿಸಿದೆ.